ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) 79ನೇ ಸ್ಥಾಪನಾ ದಿನಾಚರಣೆ

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) 79ನೇ ಸ್ಥಾಪನಾ ದಿನಾಚರಣೆ

ಮುಖ್ಯಾಂಶಗಳು: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಬ್ಯಾಂಕ್ ರಾಷ್ಟ್ರೀಕರಣದ ರೂವಾರಿ...
ಕೆ.ರಾಘವೇಂದ್ರ ನಾಯರಿ


ಬ್ಯಾಂಕ್ ರಾಷ್ಟ್ರೀಕರಣದ ರೂವಾರಿಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) 79 ನೇ ಸ್ಥಾಪನಾ ದಿನದ ಅಂಗವಾಗಿ ಇಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಸಂಘದ ಕಛೇರಿಯಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್‌ನ ಜಂಟಿ ಕಾರ್ಯದರ್ಶಿ ಕೆ‌.ರಾಘವೇಂದ್ರ ನಾಯರಿ ಮಾತನಾಡಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು 1946 ರ ಎಪ್ರಿಲ್‌ 20 ರಂದು ಬ್ಯಾಂಕ್ ಉದ್ಯೋಗಿಗಳ ಪ್ರಪ್ರಥಮ ಸಂಘಟನೆಯಾಗಿ ಸ್ಥಾಪನೆಗೊಂಡಿತು. ಸ್ಥಾಪನೆಯಾದ ದಿನದಿಂದಲೂ ಬ್ಯಾಂಕ್ ಉದ್ಯೋಗಿಗಳ ಪರವಾಗಿ ಹೋರಾಟ ಮಾಡಿ ಬ್ಯಾಂಕ್ ನೌಕರರಿಗೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 1960 ರ ದಶಕದಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಸುದೀರ್ಘವಾದ ಹೋರಾಟ ಮಾಡಿ 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಕಾರಣವಾದ ಏಕೈಕ ಬ್ಯಾಂಕ್ ನೌಕರರ ಸಂಘಟನೆ ಎಂಬ ಕೀರ್ತಿಗೆ ಭಾಜನವಾಯಿತು. ಹಾಗಾಗಿಯೇ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವನ್ನು ಬ್ಯಾಂಕ್ ರಾಷ್ಟ್ರೀಕರಣದ ಚಾಂಪಿಯನ್ ಎಂದೇ ಕರೆಯಲಾಗುತ್ತದೆ.  ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಲಕ್ಷಾಂತರ ನಿರುದ್ಯೋಗಿಗಳಿಗೆ ಬ್ಯಾಂಕುಗಳಲ್ಲಿ ಉದ್ಯೋಗ ಹಾಗೂ ಕೊಟ್ಯಾಂತರ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲವನ್ನು ನೀಡುವುದರ ಮೂಲಕ ಸ್ವಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಯಿತು. ಬ್ಯಾಂಕ್‌ನಲ್ಲಿ ಖಾಲಿಯಿರುವ ಅನೇಕ ಖಾಯಂ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಕೂಡ ಸಂಘದ ವತಿಯಿಂದ ಹೋರಾಟವನ್ನು ಮಾಡಲಾಯಿತು. ಬ್ಯಾಂಕ್ ಉದ್ಯೋಗಿಗಳ ಉದ್ಯೋಗ ಭದ್ರತೆಗೆ ಹೋರಾಡಿ ಜಯಗಳಿಸಿದ ಪರಿಣಾಮವಾಗಿ ಇಂದಿಗೂ ಅಸಂಖ್ಯಾತ ಯುವಕರು ತಾವು ಇಂಜಿನಿಯರಿಂಗ್, ಎಮ್.ಬಿ.ಎ., ಎಮ್.ಸಿ.ಎ., ಮೊದಲಾದ ಉನ್ನತ ಶಿಕ್ಷಣ ಪದವಿಯನ್ನು ಹೊಂದಿದ್ದರೂ ಸಹ ಬ್ಯಾಂಕ್ ಉದ್ಯೋಗಕ್ಕೆ ಭದ್ರತೆ ಇರುವ ಕಾರಣಕ್ಕಾಗಿ ಬ್ಯಾಂಕ್ ನೌಕರಿಯನ್ನೇ ಅರಸಿಕೊಂಡು ಬರುತ್ತಿದ್ದಾರೆ‌. 1991 ರಲ್ಲಿ ಆರಂಭವಾದ ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣದ ನೀತಿಗಳ ವಿರುದ್ಧವೂ ನಿರಂತರವಾಗಿ ಹೋರಾಡಿದ ಶ್ರೇಯಸ್ಸು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಕ್ಕೆ ಸಲ್ಲುತ್ತದೆ. ಬ್ಯಾಂಕ್ ನೌಕರರ ಶ್ರೇಯೋಭಿವೃದ್ಧಿಗಾಗಿ ಹೋರಾಡುವುದರ ಜೊತೆ ಜೊತೆಗೆ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯ ಉಳಿವಿಗಾಗಿ, ಅಸಂಘಟಿತ ವಲಯದ ನೌಕರರ ಹಕ್ಕಿಗಾಗಿ, ಬ್ಯಾಂಕ್ ಖಾಸಗಿಕರಣದ ವಿರುದ್ಧ, ವಿದೇಶೀ ನೇರ ಬಂಡವಾಳದ ಒಳ ಹರಿವಿನ ವಿರುದ್ದ, ಆಳುವ ಸರಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಅವಿರತವಾಗಿ ಸಂಘವು ಹೋರಾಡಿದೆ‌. ಕಾಂ. ಪ್ರಭಾತ್‌ಕರ್, ಕಾಂ. ಹೆಚ್.ಎಲ್‌.ಪರ್ವಾನಾ, ಕಾಂ.  ಡಿ.ಪಿ.ಚಡ್ಡಾ, ಕಾಂ. ತಾರಕೇಶ್ವರ್ ಚಕ್ರವರ್ತಿ, ಕಾಂ.ಎನ್‌.ಸಂಪತ್,  ಕಾಂ‌.ಅಜಯ್ ಮಾಂಜ್ರೇಕರ್, ಕಾಂ.ರಾಮಕೃಷ್ಣ ರೆಡ್ಡಿ ಮೊದಲಾದ ಮಹಾನ್ ನಾಯಕರುಗಳು ತಮ್ಮ ಜೀವನವನ್ನೇ ಬ್ಯಾಂಕ್ ನೌಕರರ ಸಂಘಟನೆಗಾಗಿ ಮುಡಿಪಾಗಿಟ್ಟ ಮಹಾನ್ ಚೇತನಗಳು. ಪ್ರಸ್ತುತ ಕಾಂ.ರಾಜನ್ ನಗರ್, ಕಾಂ. ಸಿ.ಹೆಚ್.ವೆಂಕಟಾಚಲಂ, ಕಾಂ. ಹೆಚ್.ವಸಂತ ರೈ, ಕಾಂ. ಪಿ.ಎಸ್.ಸುಂದರೇಶನ್,  ಕಾಂ. ಪಿ.ಆರ್‌.ಕಾರಂತ್, ಕಾಂ‌.ಎಂ.ಎಸ್.ಶ್ರೀನಿವಾಸನ್, ಕಾಂII ಜಯನಾಥ್, ಕಾಂ.ಕೆ.ಜಿ‌.ಪಣೀಂದ್ರ,  ಕಾಂ.ವಿನ್ಸೆಂಟ್ ಡಿಸೋಜ ಮೊದಲಾದವರ ಸಾರಥ್ಯದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಅತ್ಯಂತ ಸಮರ್ಥವಾಗಿ ಮುನ್ನಡೆಯುತ್ತಿದೆ‌ ಎಂದು ಕೆ‌.ರಾಘವೇಂದ್ರ ನಾಯರಿ ಹೇಳಿದರು. 

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಕಾಂ.ಹೆಚ್.ಎಸ್.ತಿಪ್ಪೇಸ್ವಾಮಿ ಮಾತನಾಡಿ  "ಬ್ಯಾಂಕಿಂಗ್ ಸೌಲಭ್ಯವು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೇ ವಿನಹ ಖಾಸಗೀ ಬಂಡವಾಳಷಾಹಿಗಳ ಲೂಟಿಗಾಗಿ ಅಲ್ಲ"  ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸ್ಪಷ್ಟವಾದ ನಿಲುವಾಗಿದೆ. ಇದಕ್ಕಾಗಿ ಸತತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. 
ಕಳೆದ 78 ವರ್ಷಗಳ ಅವಧಿಯಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ನೆರಳಿನಲ್ಲಿ ಲಕ್ಷಾಂತರ ಬ್ಯಾಂಕ್ ನೌಕರರು ನೆಮ್ಮದಿಯ ಹಾಗೂ ಸುಭದ್ರವಾದ  ಜೀವನವನ್ನು ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವಿಶೇಷ ಆಹ್ವಾನಿತ ಹೆಚ್.ಸೂಗುರಪ್ಪ,  ಪದಾಧಿಕಾರಿಗಳಾದ ಎಂ.ಎಂ.ಸಿದ್ದಲಿಂಗಯ್ಯ,  ಸಿ.ಪರಶುರಾಮ, ಅಣ್ಣಪ್ಪ ನಂದಾ, ಡಿ.ಎ.ಸಾಕಮ್ಮ,  ಶ್ರೀನಿವಾಸ ಆರ್  ನಾಡಿಗ್, ಸುಮಂತ್ ಎಸ್ ಭಟ್  ಕೆಂದ್ರ ಸಮಿತಿ ಸದಸ್ಯರುಗಳಾದ ಎಂ.ರಮೇಶ್, ಜ್ಞಾನೇಶ್ವರ ಮಾಳವಾಡೆ,  ಪ್ರಶಾಂತ್ ಎಸ್, ಡಿ.ಹರ್ಷದ್, ಎಂ.ಎಂ.ಸಿದ್ದವೀರಯ್ಯ, ಬಿ.ಸತೀಶ್, ಕೆ.ಎಂ.ಆಂಜನೇಯಪ್ಪ, ಯಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.