ಆರೋಗ್ಯಕರವಾದ ಕಾಮದಿಂದಲೇ ಆರೋಗ್ಯಕರವಾದ ಸಮಾಜ
ಧರ್ಮ ಅರ್ಥ ಮೋಕ್ಷಗಳ ಸಾಲಿನಲ್ಲಿ ನಮ್ಮವರು ಕಾಮಕ್ಕೂ ಸ್ಥಾನವನ್ನು ನೀಡಿದ್ದಾರೆ. ಅವರಿಗೆ ಅದರ ಮಹತ್ವ ಚೆನ್ನಾಗಿ ತಿಳಿದಿತ್ತು ಎನಿಸುತ್ತದೆ. ಆದರೆ ಉಳಿದವುಗಳಿಗೆ ಸೋಂಕದ ಶೀಲ ಅಶ್ಲೀಲಗಳು ಕಾಮವನ್ನು ತುಂಬಿಕೊಂಡವು. ಅದು ರಹಸ್ಯದ ವಿಷಯವಾಯಿತು. ಸಂಕೋಚಕ್ಕೆ ಎಡೆ ಮಾಡಿಕೊಟ್ಟಿತು. ಯಾವುದು ರಹಸ್ಯ ಎನಿಸುತ್ತದೆಯೋ ಅದು ಶೋಷಣೆಗೆ, ಕಳ್ಳತನಕ್ಕೆ ಆಸ್ಪದ ಕೊಡುತ್ತದೆ. ಮನುಷ್ಯ ಸಹಜ ಸ್ಥಿತಿಯಲ್ಲಿದ್ದಾಗ ಕಾಮವು ಸಹಜಸ್ಥಿತಿಯಲ್ಲಿಯೇ ಇರುತ್ತದೆ. ಅದು ನಾಚಬೇಕಾದ ವಿಷಯವಾಗಿರಲಿಲ್ಲ. ಮನುಷ್ಯ ಸಹಜ ಸ್ಥಿತಿಯಿಂದ ದೂರವಾಗಿ ಸಾಮಾಜಿಕ ಕಟ್ಟು ಕಟ್ಟಳೆಗಳಿಗೆ ಬಂಧಿತನಾಗಿ ಹೋದಂತೆಲ್ಲ ಕಾಮ ನಾಚಿಕೆಯ ಗುಪ್ತ ವಿಷಯವಾಗುತ್ತಾ ಹೋಯಿತು. ನಾಚಿಕೆ ಬಿಟ್ಟ ಸಮಾಜಗಳಲ್ಲಿಯೂ ಅದು ಭೋಗದ ವಿಷಯವಾಯಿತೇ ಹೊರತು ತಿಳುವಳಿಕೆಯ ವಿಷಯವಾಗಲಿಲ್ಲ. ಅದು ದೈಹಿಕ ಅನುಭವಕ್ಕೆ ಬೇಕಾಯಿತು; ಅರಿವಿಕೆಗೆ ಒಳಗಾಗಲಿಲ್ಲ. ಇದೇ ಕಾಮಕ್ಕೆ ಒದಗಿದ ದುರವಸ್ತೆ.
ಬದುಕಿನಲ್ಲಿ ಕಾಮ ವಹಿಸಲೇಬೇಕಾದ ಪಾತ್ರದ ಬಗೆಗೆ, ಅದರ ಶೀಲಾ ಅಶ್ಲೀಲಗಳ ಬಗೆಗೆ ಪ್ರತಿಯೊಂದು ಸಮಾಜಕ್ಕೂ ಅದರದೇ ಆದ ಮಾನದಂಡಗಳಿವೆ. ಅವುಗಳಿಗೆ ಅನುಗುಣವಾಗಿ ಕಾಮವನ್ನು ನೋಡಲಾಗುತ್ತದೆ. ಮನುಷ್ಯನ ಬದುಕನ್ನು ರೂಪಿಸುವುದರಲ್ಲಿ ಕಾಮದ ಪಾತ್ರವೂ ಇದೆ. ಆದರೆ ಅದನ್ನು ತಿಳಿದುಕೊಳ್ಳುವ ಅವಕಾಶಗಳು ಮಾತ್ರ ಇಲ್ಲ. ಶಿಕ್ಷಣದಲ್ಲಿ ಪುಸ್ತಕಗಳ ಮೂಲಕ ಬೇಕಾದ ಬೇಡವಾದ ಹತ್ತು ಹಲವು ವಿಷಯಗಳನ್ನು ಬೋಧಿಸಲಾಗುತ್ತದೆ. ಆದರೆ ಅಲ್ಲೆಲ್ಲೂ ಕಾಮದ ಬಗೆಗೆ ತಿಳಿಯ ಹೇಳುವ ವ್ಯವಸ್ಥೆ ಇಲ್ಲ. ಕಾಮವನ್ನು ಕುರಿತು ಬೋಧಿಸುವುದು ನೀತಿಗೆಡುವ ಸಂಗತಿ ಎಂದು ಭಾವಿಸಲಾಗಿದೆ. ಇದು ತುಂಬಾ ನಿರಾಶಾದಾಯಕ ಪರಿಸ್ಥಿತಿ. ವ್ಯಥೆಪಡಬೇಕಾದ ವಿಚಾರ.
ಈಗ ನಮ್ಮಲ್ಲಿ ಕಾಮ ವಿಜ್ಞಾನದ ವಿಷಯದಲ್ಲಿ ತಿಳುವಳಿಕೆ ಕೊಡುತ್ತೇವೆ ಎಂದು ಹೇಳಲಾದ ಅನೇಕ ಪ್ರಕಟಣೆಗಳು ಇವೆ. ದುರ್ದೈವದ ವಿಷಯವೆಂದರೆ ಆ ಪ್ರಕಟಣೆಗಳು ಬೋಧಿಸುವ ಕಾಮ ವಿಜ್ಞಾನ ಇಲ್ಲವೆನ್ನುವಷ್ಟರಮಟ್ಟಿಗೆ ವಿರಳವಾಗಿದೆ. ಅವುಗಳೆಲ್ಲ ಕಾಮವನ್ನು ಕೆರಳಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಮನುಷ್ಯನ ದೌರ್ಬಲ್ಯಗಳನ್ನು ಶೋಧಿಸಿ ಲಾಭ ಮಾಡಿಕೊಳ್ಳುವ ಉದ್ದೇಶವೇ ಈ ಪ್ರಕಟಣೆಯ ಕೆಲಸಗಳಾಗಿವೆ. ಇಂಥ ಬರವಣಿಗೆಗಳಿಂದ ಓದುಗರು ಅದರಲ್ಲೂ ತರುಣರು, ವಯಸ್ಕರು ಅಡ್ಡ ದಾರಿ ಹಿಡಿಯುವ ಅಪಾಯಗಳು ಹೆಚ್ಚು ಎಂದು ಅನಿಸುತ್ತದೆ.
ಅನುಭವಗಳೆಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗುವ ಅಶ್ಲೀಲ ಕಥೆ ಪ್ರಸಂಗಗಳು ಯಾವ ಬಗೆಯ ವಿಜ್ಞಾನ ಬೋಧಿಸುತ್ತವೆ ಎಂಬುದು ನಮಗೆ ತಿಳಿದಿಲ್ಲ. ಯುರೋಪಿನಲ್ಲೂ, ಅಮೆರಿಕಾದಲ್ಲೋ ಪ್ರಕಟವಾದ ಬೆತ್ತಲೆ ಚಿತ್ರಗಳನ್ನು ವಿನಾಕಾರಣ ಉಪಯೋಗಿಸಿ ಈ ಪ್ರಕಟಣೆಗಳು ನಮಗೆ ಕಾಮ ವಿಜ್ಞಾನವನ್ನು ಬೋಧಿಸುತ್ತವೆ. ಅವುಗಳ ಪ್ರಕಾಶಕರು ಬೇಗನೆ ಶ್ರೀಮಂತರಾಗುತ್ತಾರೆ. ಓದುಗದಲ್ಲಿ ಮಾತ್ರ ಕೆಲವರು ಹಾದಿಗೆಟ್ಟು ಜೀವನಪರ್ಯಂತ ಪರಿತಪಿಸುವಂತಾಗುತ್ತದೆ. ಈ ದೇಶದಲ್ಲಿ ಬಹುಜನರ ಕಾಮ ಹತ್ತಿಕ್ಕಿದ ಕಾಮ. ಅದರ ಬಳಕೆಗೆ ಬಿಡುಗಡೆಗೆ ನೂರೆಂಟು ಅಡ್ಡಹಾದಿಗಳು. ಸಿನಿಮಾ, ನೀಲಿಚಿತ್ರ, ಪುಸ್ತಕ, ಪತ್ರಿಕೆ ಇತ್ಯಾದಿ
ವೇಶ್ಯಾವಾಟಿಕೆಯನ್ನು ಮುಚ್ಚಬೇಕೆಂದು ನಾನು ಬಯಸುವುದಿಲ್ಲ. ಅವರನ್ನು ಅಧಿಕೃತಗೊಳಿಸಬೇಕು. ಅವರ ಕೆಲಸಕ್ಕೆ ಪರಾವನೆಗೆ ಕೊಡಬೇಕು ಮುಖ್ಯವಾಗಿ ಅವರನ್ನು ಆರೋಗ್ಯವಂತರನ್ನಾಗಿ ಇಡಬೇಕು. ಪ್ರತಿಯೊಂದು ಆರೋಗ್ಯವಂತರನ್ನಾಗಿ ಮಾಡಬೇಕೆಂಬುದು ನನ್ನ ಅಪೇಕ್ಷೆ. ಮನುಷ್ಯನ ದೌರ್ಬಲ್ಯಗಳನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲ ಆದರೆ ಅಂತವರನ್ನು ಕಾಪಾಡುವ ಪ್ರಯತ್ನವನ್ನು ಮಾತ್ರ ನಾವು ಮಾಡಬೇಕಾಗುತ್ತದೆ.
ಕಾಮ, ಪರಂಪರೆಯ ಜಾಡ್ಯದಿಂದ ಒಂದು ಕಡೆ ಅರಳುತ್ತದೆ. ಸ್ವಾರ್ಥಿಗಳ ಕೈಯಲ್ಲಿ ಸಿಕ್ಕಿಕೊಂಡು ಇನ್ನೊಂದು ಕಡೆ ನರಳುತ್ತದೆ. ಈ ಎರಡು ನರಳುವಿಕೆಯಿಂದ ಇಂದು ನಾವು ಕಾಮವನ್ನು ರಕ್ಷಿಸಬೇಕಾಗಿದೆ. ಕಾಮದ ಬಗ್ಗೆ ಜನ ಚೆನ್ನಾಗಿ ತಿಳಿಯಬೇಕು. ವೈಜ್ಞಾನಿಕವಾಗಿ ತಿಳಿಯಬೇಕು. ಅದು ನಾಚುವ ವಿಷಯವಲ್ಲ, ಮುಚ್ಚಿಡುವ ವಿಷಯವಲ್ಲ, ಅದು ನಮ್ಮನ್ನು ಆಳುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವುದೆಂದರೆ ನಮ್ಮನ್ನು ನಾವೇ ತಿಳಿದುಕೊಂಡಂತೆ. ಆದ್ದರಿಂದ ನಮ್ಮ ಜೀವನದಲ್ಲಿ ಕಾಮಕ್ಕೆ ಗೌರವಯುತವಾದ ಸ್ಥಾನ ಇರಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಅತ್ಯಾಚಾರಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಇದು ಶಿಕ್ಷಣದಲ್ಲಿನ ಸ್ಥಾನದಿಂದ, ಸಮಾಜದ ನಿಲುವಿನಿಂದ ಸಾಧ್ಯವಾಗುತ್ತದೆ. ಆರೋಗ್ಯಕರವಾದ ಕಾಮದಿಂದಲೇ ಆರೋಗ್ಯಕರವಾದ ಸಮಾಜ. ಇಂತಹ ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇಏನಂತೀರಾ?
ಉದಂತ ಶಿವಕುಮಾರ್
ಲೇಖಕರು
ಬೆಂಗಳೂರು -೫೬೦೦೫೬
ದೂರವಾಣಿ:9739758558