ಆರೋಪಿಗಳ ಸೆರೆ, ಕಳವು ಮಾಲು ವಶ

ಆರೋಪಿಗಳ ಸೆರೆ, ಕಳವು ಮಾಲು ವಶ

ಕೆಜಿಎಫ್.ಫೆ.೦೪: ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸ್ವರ್ಣನಗರ ಬಡಾವಣೆಯ ಮನೆ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ರೂ.೧,೬೨,೦೦೦/- ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್‌ಸನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಜ. ೧೭ ರಿಂದ ೨೨ ರ ಮಧ್ಯೆ ಸ್ವರ್ಣನಗರ ಬಡಾವಣೆಯ ವಾಸಿ ನಿರ್ಮಲಾದೇವಿ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬಾಗಿಲನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.ಪಿಎಸ್‌ಐ ತ್ಯಾಗರಾಜ್ ರವರ ನೇತೃತ್ವದ ಅಪರಾಧ ಪತ್ತೆ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆ.ಜಿ.ಎಫ್ ವಾಸಿಗಳಾದ ಚಾಮರಾಜಪೇಟೆಯ ಸಂಜಯ್ ಮತ್ತು ಗೌತಮನಗರದ ಶಿವಶಂಕರ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ರೂ.೧,೬೨,೦೦೦/- ಮೌಲ್ಯದ ಚಿನ್ನದ ಆಭರಣಗಳು, ರೂ..೩೦,೦೦೦/- ನಗದು ಹಣ ಹಾಗೂ ಕಳವು ಮಾಡಿದ ಹಣದಿಂದ ಖರೀದಿಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.ಡಿವೈಎಸ್ಪಿ ಎಸ್.ಪಾಂಡುರಂಗ, ರಾಬರ್ಟ್‌ಸನ್‌ಪೇಟೆ ಸಿಪಿಐ ಪಿ.ಎಂ.ನವೀನ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಿಎಸ್‌ಐ ತ್ಯಾಗರಾಜ್ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಎಂ.ಎನ್.ಗೋಪಿನಾಥ್, ರಘು, ಬಸವರಾಜ, ವಿನೋದ್‌ಕುಮಾರ್, ವೆಂಕಟಾಚಲಪತಿ, ಚಾಲಕ ಮನೋಹರ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.ಚಿತ್ರ ಶೀರ್ಷಿಕೆ: ೦೪ಕೆಜಿಎಫ್೦೨: ವಶಪಡಿಸಿಕೊಂಡ ಕಳವು ಮಾಲಿನೊಂದಿಗೆ ರಾಬರ್ಟ್‌ಸನ್‌ಪೇಟೆ ಪೊಲೀಸರ ತಂಡ.