ಉಚ್ಚೆಂಗೆಮ್ಮ ಪಾದಗಟ್ಟೆ,ಹಾಲಮ್ಮ ತೋಪು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ವಶ:ಸಿಸಿ ಕ್ಯಾಮೇರಾ ಅಳವಡಿಕೆ

ಉಚ್ಚೆಂಗೆಮ್ಮ ಪಾದಗಟ್ಟೆ,ಹಾಲಮ್ಮ ತೋಪು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ವಶ:ಸಿಸಿ ಕ್ಯಾಮೇರಾ ಅಳವಡಿಕೆ

ಹರಪನಹಳ್ಳಿ ಸುದ್ದಿ: ತಾಲೂಕಿನ ಐತಿಹಾಸಿಕ ಕ್ಷೇತ್ರ ಉಚ್ಚಂಗಿದುರ್ಗ ಗ್ರಾಮದ ಉಚ್ಚೆಂಗೆಮ್ಮ ದೇವಸ್ಥಾನದ ಉಪಸಮಿತಿಗೆ ಒಳಪಟ್ಟಿರುವ  ಉಚ್ಚೆಂಗೆಮ್ಮ ಪಾದಗಟ್ಟೆ,ಹಾಗೂ ಹಾಲಮ್ಮ ತೋಪು ದೇವಸ್ಥಾನಗಳನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ   ಆದೇಶದಂತೆ ತಹಶೀಲ್ದಾರ್ ಗಿರೀಶ್ ಬಾಬು,ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರಪ್ಪ,ಡಿವೈಎಸ್ ಪಿ ವೆಂಕಟಪ್ಪನಾಯಕ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ನಡುವೆ ಹಿಂದೂ ಧಾರ್ಮಿಕ‌ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಳ್ಳಲಾಯಿತು.

ಗುಡ್ಡದ ಮೇಲಿನ ಉಚ್ಚೆಂಗೆಮ್ಮ ದೇವಸ್ಥಾನಕ್ಕೆ ವಯೋವೃದ್ದರು,ಮಕ್ಕಳು,ಬೆಟ್ಟಕ್ಕೆ ಏರಲು ಸಾಧ್ಯವಾಗದ ಕಾರಣ ಉಚ್ಚೆಂಗೆಮ್ಮ ದೇವಿ ಪಾದಗಟ್ಟೆ,ಹಾಲಮ್ಮ ತೋಪಿನ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು.ಧಾರ್ಮಿಕ ದತ್ತಿ ಇಲಾಖೆ ಉಪಸಮಿತಿಗೆ ಒಳಪಟ್ಟಿದ್ದ ದೇವಸ್ಥಾನಗಳನ್ನು ಗ್ರಾಮದ ಮುಖಂಡರುಗಳನ್ನೊಳಗೊಂಡ ಉಚ್ಚೆಂಗೆಮ್ಮ ದೇವಸ್ಥಾನ  ಅಭಿವೃದ್ದಿ ಖಾಸಗಿ ಸಮಿತಿ ನಿರ್ವಹಣೆಮಾಡಲಾಗುತ್ತಿತ್ತು.ಧಾರ್ಮಿಕ ದತ್ತಿ ಇಲಾಖೆ ಅನುದಾನ ಹಾಗೂ ಭಕ್ತರ ಕಾಣಿಕೆ ಹುಂಡಿ ಹಣ, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವ ಕಾರಣ ದೇವಸ್ಥಾನದ ಸರ್ವತೋಮುಖ  ಅಭಿವೃದ್ದಿ ಪಡಿಸುವ ಸದುದ್ದೇಶದಿಂದ ಹಿಂದೂ ಧಾರ್ಮಿಕ ಮತ್ತು ದತ್ತಿ  ಇಲಾಖೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.  

ಬಂದೋಬಸ್ತ್ ಗೆ 150 ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.ಹೊಸದಾಗಿ 10 ಸಿಸಿ ಕ್ಯಾಮೇರಾಗಳನ್ನು ದೇವಸ್ಥಾನ ಸುತ್ತಮುತ್ತ ಕಣ್ಗಾವಲಿಗೆ ಅಳವಡಿಸಲಾಗಿದೆ.

ಸಂದರ್ಭದಲ್ಲಿ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಸಮಿತಿ ಇಓ ಹನುಮಂತಪ್ಪ,ಉಚ್ಚೆಂಗೆಮ್ಮ ದೇವಸ್ಥಾನ ಸಮಿತಿ ಇಓ ಮಲ್ಲಪ್ಪ,ಮೈಲಾರದ ಮೈಲಾರ ಲಿಂಗೇಶ್ವರ ದೇವಸ್ಥಾನ ಸಮಿತಿ ಇಓ ಶಾಂತಮ್ಮ,ಹೊಸಪೇಟೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪರಿವೀಕ್ಷಕ ಚೇತನ್,ಗ್ರಾ.ಪಂ ಪಿಡಿಓ ಪರಮೇಶ್ವರಪ್ಪ,ಗ್ರಾ.ಪಂ ಅಧ್ಯಕ್ಷೆಯ ಪತಿ ಉಮೇಶ್ ನಾಯ್ಕ,ಎಸ್ ಡಿಎ ದಂಡ್ಯೆಪ್ಪ,ಸಿಬ್ಬಂದಿ ಗಂಗಾಧರಪ್ಪ,ಗ್ರಾಮದ ಮುಖಂಡರುಗಳು ಹಾಗೂ ಉಚ್ಚೆಂಗೆಮ್ಮ ದೇವಸ್ಥಾನ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.