ಖಗೋಲ ವಿಜ್ಞಾನಕ್ಕೆ ಭದ್ರ ಬುನಾದಿ ಹಾಕಿದವನು "ವಿಲಿಯಂ ಹರ್ಷಲ್

ಎರಡು ಸಾವಿರ ನೀಹಾರಿಕೆಗಳು, ಎಂಟುನೂರು ಯುಗ್ಮ ನಕ್ಷತ್ರಗಳು, ಸೌರವ್ಯೂಹದ ಗ್ರಹ, ಉಪಗ್ರಹಗಳನ್ನು ಕಂಡುಹಿಡಿದು, ಖಗೋಲ ವಿಜ್ಞಾನಕ್ಕೆ ಭದ್ರವಾದ ಅಡಿಪಾಯ ಹಾಕಿದ ವ್ಯಕ್ತಿ ವಿಲಿಯಂ ಹರ್ಷಲ್. ಇವನಿಗೆ ಜೀವನದಾದ್ಯಂತ ನೆರವಾದವಳು ಸಹೋದರಿ ಕ್ಯಾರೊಲಿನ್ ಹರ್ಷಲ್.
ವಿಲಿಯಂ ಹರ್ಷಲನ ಜನ್ಮಸ್ಥಳ ಜರ್ಮನಿಯ ಹ್ಯಾನೋವರ್. 1738 ನವೆಂಬರ್ 15 ರಂದು ಜನಿಸಿದನು. ಇವನ ತಂದೆ 1757 ರಲ್ಲಿ ಜೀವನೋಪಾಯಕ್ಕಾಗಿ ಮಗನನ್ನು ಇಂಗ್ಲೆಂಡಿಗೆ ಕಳುಹಿಸಿದ. ಮುಂದೆ ಇಂಗ್ಲೆಂಡ್ ಹರ್ಷಲನ ಸ್ಥಳವಾಯಿತು. 1766 ರ ವೇಳೆಗೆ ಅವನು ಒಳ್ಳೆಯ ಸಂಗೀತಗಾರನೆಂದು ಹೆಸರಾಗಿದ್ದನು. ತನ್ನ ದಿನದ ಕೆಲಸಗಳೆಲ್ಲ ಮುಗಿದ ಬಳಿಕ ಗ್ರೀಕ್, ಲ್ಯಾಟಿನ್ ಭಾಷೆಗಳು, ಸಾಹಿತ್ಯ ಹಾಗೂ ವಿಜ್ಞಾನಗಳ ಅಧ್ಯಯನ ನಡೆಸುತ್ತಿದ್ದ. ಖಗೋಳ ವಿಜ್ಞಾನವು ಬಿಡುವಿನ ವೇಳೆಯ ಹವ್ಯಾಸವಾಗಿ ಅವನ ಜೀವನವನ್ನು ಪ್ರವೇಶಿಸಿತು. ಹರ್ಷೆಲನಿಗೆ ದೂರದರ್ಶಕಗಳನ್ನು ಕೊಳ್ಳುವ ಸಾಮರ್ಥ್ಯವಿರಲಿಲ್ಲ. ತಕ್ಕ ಗಾಜುಗಳನ್ನು ಅರೆದು ತಾನೇ ದೂರದರ್ಶಕ ತಯಾರಿಸಿದ. ಸ್ವತಃ ವಿದ್ಯಾರ್ಜನೆ ಮಾಡಿದ.
ಸೋದರಿ ಕ್ಯಾರೊಲಿನ್ ಇವನಿಗೆ ಅಗತ್ಯವಾಗಿದ್ದ ಯವಗಳನ್ನು ಅರೆದು ಕೊಡುತ್ತಿದ್ದಳು. ಸುವ್ಯವಸ್ಥಿತವಾಗಿ ನಕ್ಷತ್ರ ಅಧ್ಯಯನ ಮಾಡಬೇಕೆಂದು ನಿರ್ಧರಿಸಿದ ಹರ್ಷಲ್ 1774 ರಿಂದ ತನ್ನ ವೀಕ್ಷಣೆಯನ್ನು ಜಗತ್ತಿಗೆ ವರದಿ ಮಾಡಲು ಆರಂಭಿಸಿದ. 1781 ರಲ್ಲಿ ನಕ್ಷತ್ರ ವೀಕ್ಷಣೆಯಲ್ಲಿ ತೊಡಗಿದ್ದಾಗ ಸೌರವ್ಯೂಹದ ಯೂರನಸ್ ಗ್ರಹ ಹರ್ಷಲನಿಗೆ ಕಂಡುಬಂದಿತು. ಇದರಿಂದ ಹರ್ಷಲನ ಖ್ಯಾತಿ ಹರಡಿತು. ತನ್ನ ಶೋಧನೆ ಮುಂದುವರಿಸಲು ದೂರದರ್ಶಕಗಳನ್ನು ತಯಾರಿಸಿ ಮಾರಿ ಹಣಗಳಿಸುತ್ತಿದ್ದ.
ಶ್ರೀಮಂತ ವಿಧವೆ ಒಬ್ಬಳನ್ನು 1788 ರಲ್ಲಿ ಆತ ಮದುವೆ ಆಗಿದ್ದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಸೂರ್ಯನಿಂದ ನಕ್ಷತ್ರಗಳಿಗಿರುವ ದೂರ ಮತ್ತು ನಕ್ಷತ್ರ- ನಕ್ಷತ್ರಗಳಿಗಿರುವ ಪರಸ್ಪರ ದೂರಗಳನ್ನು ಅಳತೆ ಮಾಡಲು ಹರ್ಷಲ್ ನಿರ್ಧರಿಸಿದ. ಯುಗ್ಮ ನಕ್ಷತ್ರಗಳ ಅಸ್ತಿತ್ವ ಅಲ್ಲಿಯವರೆಗೆ ತಿಳಿದಿರಲಿಲ್ಲ. ಅನೇಕ ನಕ್ಷತ್ರಗಳು ಪರಸ್ಪರ ನಿಕಟವಾಗಿದ್ದರು ಅವುಗಳ ಪ್ರಕಾಶದಲ್ಲಿ ವ್ಯತ್ಯಾಸವಿರುವುದು ಅವನ ಗಮನಕ್ಕೆ ಬಂದಿತು. ಇವು ಒಂದನ್ನೊಂದು ಸುತ್ತುತ್ತಿವೆ ಇವು ಯುಗ್ಮ ನಕ್ಷತ್ರಗಳೆಂದು ಅವನಿಗೆ ತಿಳಿಯಿತು.
ಒಂದು ಬಾರಿ ದೂರದರ್ಶಕದ ನಿರ್ಮಾಣವನ್ನು ಮುಗಿಸಿದ. ಅದರ ಮೂಲಕ ನೋಡಲು ಆರಂಭಿಸಿದ ರಾತ್ರಿಯೇ ಶನಿ ಗ್ರಹದ ಎರಡು ಉಪಗ್ರಹಗಳನ್ನು ಹೊಸದಾಗಿ ಕಂಡುಹಿಡಿದ. ಶನಿಯೊಡನೆ ಅದರ ಉಂಗುರಗಳು ಭ್ರಮಿಸುತ್ತವೆ ಎಂದು ಕಂಡುಹಿಡಿದ. ಮಂಗಳ ಗ್ರಹದಲ್ಲಿ ಧ್ರುವ ಟೊಪ್ಪಿಗೆಗಳನ್ನು ಹೋಲುವ ಬಿಳಿಯ ಕಲೆಗಳನ್ನು ಗುರುತಿಸಿ ಆ ಗ್ರಹದ ವಾಯುಗುಣ ಹೆಚ್ಚು ಕಡಿಮೆ ಭೂಮಿಯಂತಿರಬಹುದು ಎಂದು ಭಾವಿಸಿದ. 1783 ಹಾಗೂ 1805 ರಲ್ಲಿ ಇಂದಿನ ಸೌರ ಭೌತವಿಜ್ಞಾನಿಕ್ಕೆ ಮೂಲಭೂತವಾದ ಅವಲೋಕನೆಗಳನ್ನು ಮಾಡಿ, ಕೆಲವು ತರ್ಕಗಳನ್ನು ವಿಲಿಯಂ ಹರ್ಷಲ್ ಮಂಡಿಸಿದ. "ಆಕಾಶದಲ್ಲಿ ಸೌರವ್ಯವಸ್ಥೆಯ ಚಲನೆ" ಎಂಬ ಬರಹ ಪ್ರಕಟಿಸಿದ. ನಮ್ಮ ಸೂರ್ಯವೆಂಬುದು ಒಂದು ನಕ್ಷತ್ರವೇ. ಈ ವಿಶ್ವ ಪರಿಮಿತ ಸಂಖ್ಯೆಯಲ್ಲಿರುವ ನಕ್ಷತ್ರಗಳ ಸಮೂಹ. ಸೂರ್ಯ ಸುಮಾರು ಈ ವಿಶ್ವದ ಕೇಂದ್ರದಲ್ಲಿದೆ ಎಂದು ವಿಶದೀಕರಿಸಿದ.
ನಿರಂತರ ಅವಲೋಕನೆಗಳಿಂದ ಆತ ಆಕಾಶ ಗಂಗೆಯೊಳಗಿನ ನಕ್ಷತ್ರ ವ್ಯವಸ್ಥೆಯ ಒಂದು ಚಿತ್ರಣ ತಯಾರಿಸಿದ. ಸೂರ್ಯ ಬೆಳಕಿನ ವರ್ಣ ವಿಶ್ಲೇಷಣೆ ನಡೆಸುತ್ತಿದ್ದಾಗ ಇದರಲ್ಲಿ ದೃಗ್ಗೋಚರ ರೋಹಿತದ ವಿಕಿರಣಗಳು ಮಾತ್ರವಲ್ಲದೆ ಅಗೋಚರ ವಿಕಿರಣಗಳಿವೆ ಎಂದು ಅವನಿಗೆ ತಿಳಿಯಿತು. 1800 ರಲ್ಲಿ ಅವಕೆಂಪು ವಿಕಿರಣ ಮೊದಲಿಗೆ ತಿಳಿದು ಬಂದಿತು. ವಿಲಿಯಂ ಹರ್ಷಲ್ 1822 ಆಗಸ್ಟ್ 25ರಂದು ಇಂಗ್ಲೇಂಡಿನ ಸ್ಲೋ ಎಂಬಲ್ಲಿ ತೀರಿಕೊಂಡನು.
ವಿಲಿಯಂ ಹರ್ಷೆಲನ ಸೋದರಿ ಕ್ಯಾರೊಲಿನ್ ಅಣ್ಣನಿಗಿಂತ 12 ವರ್ಷ ಕಿರಿಯವಳು. ಮಹಿಳಾ ಖಗೋಲ ವಿಜ್ಞಾನಿಗಳಲ್ಲಿ ಪ್ರಥಮಳು. ತನ್ನ ಜೀವಿತವನ್ನೇ ಈ ಕಾರ್ಯಕ್ಕಾಗಿ ಮೀಸಲಿಟ್ಟು ಕ್ಯಾರೊಲಿನ್ ಕನ್ಯೆಯಾಗಿಯೇ ಉಳಿದಳು. ಸ್ವತಃ ವೀಕ್ಷಣೆಯಿಂದ ಆಕೆ 1786 ರಿಂದ 1797 ರಲ್ಲಿ 8 ಧೂಮಕೇತುಗಳನ್ನು ಕಂಡುಹಿಡಿದಳು. 1798ರಲ್ಲಿ 561 ನಕ್ಷತ್ರಗಳ ವೀಕ್ಷಣೆಯ ವರದಿ ಪಟ್ಟಿಯನ್ನು ರಾಯಲ್ ಸೊಸೈಟಿಗಾಗಿ ಬರೆದುಕೊಟ್ಟಳು. ಸೋದರ ವಿಲಿಯಂ ಹರ್ಷೆಲ್ ಕಾಲಾನಂತರ ಹ್ಯಾನೋವರ್ ಗೆ ಹಿಂತಿರುಗಿ ತನ್ನ ಅಧ್ಯಯನವನ್ನು ಮುಂದುವರಿಸಿದಳು. 98ನೆಯ ವಯಸ್ಸಿನಲ್ಲಿ 1848 ಜನವರಿ 9ರಂದು ಹ್ಯಾನೋವರ್‌ನಲ್ಲಿ ಕಾಲವಾದಳು.
ಜಾನ್ ಹರ್ಷೆಲ್; ವಿಲಿಯಂ ಹರ್ಷೆಲನ ಒಬ್ಬನೇ ಮಗ. ಚಿಕ್ಕಂದಿನಲ್ಲಿ ಅವನ ಪ್ರಥಮ ಒಲವು ಗಣಿತದ ಕಡೆಗೆ ಇತ್ತು. ಆದರೆ 1816 ರಿಂದಚಾಗೆ ತಂದೆಯೊಡನೆ ಖಗೋಳ ವಿಜ್ಞಾನ ಅಧ್ಯಯನ ಆರಂಭಿಸಿದ. ತಂದೆಯಂತೆ ಹೆಸರುವಾಸಿಗೆಯಾದ. ಜಾನ್ ಹರ್ಷೆಲ್ ಇಂಗ್ಲೆಂಡಿನ ಬಂಕಿಂಗ್ ಹ್ಯಾಮ್ ಷೈರ್ ನಲ್ಲಿರುವ ಸ್ಲೋ ದಲ್ಲಿ 1792 ಮಾರ್ಚ್ 7ರಂದು ಹುಟ್ಟಿದ. ಗಣಿತ ವಿಷಯದಲ್ಲಿ ಶಿಕ್ಷಣ, ಕೇಂಬ್ರಿಜ್ ವಿಶ್ವವಿದ್ಯಾನಿಲಯ ಪದವಿ ಪಡೆದ. ತಾನೂ ಕೆಲವು ನಿಹಾರಿಕೆಗಳನ್ನೂ, ನಕ್ಷತ್ರಗಳನ್ನು ಕಂಡುಹಿಡಿದ. 1833 ವೇಳೆಗೆ ಈ ಕಾರ್ಯವನ್ನು ಒಂದು ಸಂಪೂರ್ಣ ಘಟ್ಟಕ್ಕೆ ತಂದು ನಿಲ್ಲಿಸಿದ. ಅನಂತರ ಗುಡ್ ಹೋಪ್ ಭೂಶಿರದಿಂದ ದಕ್ಷಿಣಾರ್ಧ ಖಗೋಲದ ಅಧ್ಯಯನ ಮಾಡಲು ನಿರ್ಧರಿಸಿದ. 1834 ರಿಂದ 4 ವರ್ಷ ಕಾಲ ದಕ್ಷಿಣಾರ್ಧ ಖಗೋಲದ ನಿಹಾರಿಕೆ, ನಕ್ಷತ್ರ ಗುಂಪು, ಅಲ್ಲಿನ ಯುಗ್ಮ ನಕ್ಷತ್ರಗಳ ಸಾಪೇಕ್ಷ ನೆಲೆ, ಗಾತ್ರ ಮತ್ತು ನಕ್ಷತ್ರ ಕಾಂತಿಯ ಏರಿಳಿತ, ಪರಸ್ಪರ ವ್ಯತ್ಯಾಸಗಳನ್ನು ವೀಕ್ಷಿಸಿದ. ಇಂಗ್ಲೆಂಡಿಗೆ 1838 ರಲ್ಲಿ ವಾಪಸಾಗಿ ಒಂಬತ್ತು ವರ್ಷಗಳ ಕಾಲ ಈ ದತ್ತಾಂಶಗಳನ್ನು ವ್ಯವಸ್ಥಿತವಾಗಿ ಕಲೆ ಹಾಕುವುದರಲ್ಲಿ ನಿರತನಾದ.
ರಾಸಾಯನ ವಿಜ್ಞಾನದಲ್ಲಿಯೂ ಜಾನ್ ಹರ್ಷೆಲ್ ಸಾಕಷ್ಟು ನುರಿತಿದ್ದ. ಫೋಟೋಗ್ರಫಿಯಲ್ಲಿ ಸೋಡಿಯಂ ಹೈಪೊಸಲ್ಫೈಟ್ ಮಹತ್ವ ಕಂಡು ಬಂದದ್ದು ಇವನಿಂದ. ಬೆಳ್ಳಿಯ ಲವಣಗಳಿಗೆ ಇದು ಒಳ್ಳೆಯ ವಿಲೀನಕಾರಿಯೆಂದು ಕಂಡುಕೊಂಡ. ಬೆಳಕಿನ ರಾಸಾಯನಿಕ ಕ್ರಿಯೆಗೆ ಒಳಪಡುವಂತಹ ಕಾಗದ ಕಂಡುಹಿಡಿದು ಫೋಟೋಗ್ರಫಿಗೆ ನೆರವಾದ. ಬೆಳಕು ತರಂಗದಂತೆ ವರ್ತಿಸುವುದೆಂಬ ವಾದದ ಬಗೆಗೆ ಉಪಯುಕ್ತ ಸಂಶೋಧನೆಗಳನ್ನು ನಡೆಸಿದ. ಹಲವಾರು ಬಗೆಯ ಖಗೋಲ ವಿಜ್ಞಾನದ ಉಪಕರಣಗಳನ್ನು ಕಂಡುಹಿಡಿದ ಗೌರವವು ಜಾನ್ ಹರ್ಷೆಲ್ ಗೆ ಸಲ್ಲುತ್ತದೆ.
"ಭೂಶಿರದ ವೀಕ್ಷಣೆಗಳು", "ಖಗೋಲ ವಿಜ್ಞಾನದ ರೂಪರೇಷೆಗಳು", "ವಿಜ್ಞಾನ ವಿಷಯಗಳ ಪರಿಚಿತ ಭಾಷಣಗಳು", ಇವು ಅವನ ಕೆಲವು ಬರಹಗಳು. ಬೆಳಕು ಹಾಗು ಧ್ವನಿಗಳನ್ನು ಕುರಿತಾದ ಪ್ರಬಂಧಗಳನ್ನು ಬರೆದ. ಪ್ರಕೃತಿ ತತ್ವಶಾಸ್ತ್ರದ ಅಧ್ಯಯನದ ಬಗೆಗೆ "ಪೀಠಿಕಾವ್ಯಾಖ್ಯಾನ" ಎಂಬ ಬರಹ ಅದರ ಸೊಗಸಾದ ನಿರೂಪಣೆಗೆ ಹೆಸರಾಗಿದೆ. ಖಗೋಲ ವಿಜ್ಞಾನದ ರಾಯಲ್ ಸಂಸ್ಥೆಯನ್ನು ಸ್ಥಾಪಿಸಿದ್ದು ಜಾನ್ ಹರ್ಷೆಲ್. ಟಂಕಸಾಲೆಯ ಅಧ್ಯಕ್ಷನಾಗುವ ಅವಕಾಶ ಅವನಿಗೆ ದೊರೆಯಿತು. ನೂರು ವರ್ಷಕ್ಕೆ ಹಿಂದೆ ನ್ಯೂಟನ್ ಇದೇ ಅಧಿಕಾರದಲ್ಲಿದ್ದ. ಜಾನ್ ಹರ್ಷೆಲ್ 1871 ಮೇ11 ರಂದು ತೀರಿಕೊಂಡ. ತಂದೆ ವಿಲಿಯಂ ಹರ್ಷೆಲ್ ಹಾಗೂ ಮಗ ಜಾನ್ ಹರ್ಷೆಲ್ ಇವರಿಬ್ಬರಿಗೂ ಅವರ ಸಾಧನೆಗಳ ದ್ಯೋತಕವಾಗಿ ಇಂಗ್ಲೆಂಡಿನ "ನೈಟ್" ಪದವಿ ದೊರೆಯಿತು.
ಉದಂತ ಶಿವಕುಮಾರ್
ಲೇಖಕರು
ಬೆಂಗಳೂರು -560056
ಮೊಬೈಲ್ ನಂ: 9739758558