ಗಂಡ-ಹೆಂಡತಿ ಒಬ್ಬರಿಗೊಬ್ಬರು ಅರಿತು ಬಾಳಲು ದಿವ್ಯೌಷಧ: "ಅನುತ್ತರಾ"

ಗಂಡ-ಹೆಂಡತಿ ಒಬ್ಬರಿಗೊಬ್ಬರು ಅರಿತು ಬಾಳಲು ದಿವ್ಯೌಷಧ: "ಅನುತ್ತರಾ"

ನನ್ನ ಪ್ರೀತಿಯ ರಾಷ್ಟ್ರಕವಿ ಕುವೆಂಪುರವರಿಗೆ:-
ನೀವು ಬರೆದು, 1965 ರಲ್ಲಿ ಪ್ರಕಟಿಸಿದ "ಅನುತ್ತರಾ' ಕವನ ಸಂಕಲನವನ್ನು ನಾನಿಂದು ಓದಿದೆ. ಈ ಸಂಕಲನದಲ್ಲಿ 21 ಕವಿತೆಗಳಿವೆ. ಇದನ್ನು ಓದಿದ ಹಿಂದಿನ ಹಿರಿಯರು ಇವುಗಳನ್ನು ಪ್ರೇಮಗೀತೆಗಳು ಅಥವಾ 'ಪ್ರೇಮೋಪನಿಷತ್ತು'ಗಳು ಎಂದು ಕರೆದಿದ್ದಾರೆ.

ಇವತ್ತಿನ ಯುವ ಪೀಳಿಗೆಯವರು ಇಲ್ಲಿನ ಕವಿತೆಗಳನ್ನು ಗಂಭೀರವಾಗಿ ಓದಿಕೊಳ್ಳುವ ಅನಿವಾರ್ಯತೆ ಇದೆ. ಏಕೆಂದರೆ ಇವತ್ತಿನ ಕೆಲವು ಯುವ ಪೀಳಿಗೆಯವರು ಸಂಸಾರ ಜೀವನದಲ್ಲಿ ಎರಡು-ಮೂರು ವರ್ಷಗಳಲ್ಲೇ ಸೋತು ವಿವಾಹ ವಿಚ್ಛೇದನೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಹಿರಿಯರೂ ಕೂಡ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ತನ್ನ ಹೆಂಡತಿಯ ಮೇಲೆ ದೌರ್ಜನ್ಯ ಎಸಗುವುದನ್ನು ಸಮಾಜದಲ್ಲಿ ನಾವು ಕಾಣುತ್ತಿದ್ದೇವೆ. ಸಂಸಾರಗಳಲ್ಲಿ ಬೇಗ ಬಿರುಕು ಉಂಟಾಗಲು ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳದಿರುವುದು ಪ್ರಮುಖವಾದ ಅಂಶವಾಗಿದೆ. ಹಾಗಾಗಿ ನೀವು ಬರೆದಿರುವ "ಅನುತ್ತರಾ" ಸಂಕಲನ ಇದಕ್ಕೆ ದಿವ್ಯೌಷಧ ಎಂದರೆ ಅತಿಶಯೋಕ್ತಿಯಲ್ಲ.

ಈ ಮೂಲಕ  ಹೆಂಡತಿಯಾದವಳು ಎಷ್ಟು ಮುಖ್ಯ, ಆಕೆಗೆ ನಾವು ನೀಡಬೇಕಾದ ಗೌರವ, ನಮ್ಮ ಜೀವನದಲ್ಲಿ ಅವಳ ಪಾತ್ರ, ಸಂಸಾರದಲ್ಲಿ ಅವಳ ಜವಾಬ್ದಾರಿ ಎಲ್ಲವನ್ನು ತಮ್ಮ ಕವಿತೆಗಳ ಮೂಲಕ ಕಟ್ಟಿಕೊಟ್ಟಿಕೊಟ್ಟಿದ್ದೀರಿ. ಇದು ಸಂಸಾರ ವಿಮುಖರಿಗೆ ಒಂದು ದಿವ್ಯೌಷಧವಾಗಿದೆ. ಉಳಿದವರಿಗೂ ಸಿದ್ಧೌಷಧವೂ ಆಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಹೆಣ್ಣು ಜಗದ ಕಣ್ಣು, ಹೆಣ್ಣು ಸಂಸಾರದ ಕಣ್ಣು, ಹೀಗೆ ಮಾತನಾಡುವ ನಮ್ಮಲ್ಲಿ ನೀವು ಕೊಟ್ಟಿರುವ ಇಲ್ಲಿನ ಪ್ರೇಮಗೀತೆಗಳನ್ನು ಓದಿ ಅರ್ಥಮಾಡಿಕೊಳ್ಳುವ ಮೂಲಕ ಗಂಡ ಹೆಂಡತಿಯ ನಡುವೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕಾದ ಕೆಲಸವೂ ಆಗಬೇಕಾಗಿದೆ.

"ಅನುತ್ತರಾ" ಸಂಕಲನದಲ್ಲಿ ನೋಡುವುದಾದರೆ;
ಇಂದ್ರಿಯದ, ಮನದ, ಬುದ್ಧಿಯ ತೊಂದರೆಯ ತೊಲಗೆ ನಿನ್ನೊಳೊಂದಾಗುವುದೆ ದಿವ್ಯೌಷಧ!
ಹೀಯಾಳಿಸುವ, ಹೊಟ್ಟೆಕಿಚ್ಚು ಹೊಂದಿರುವ ನನಗೆ
ನಿನ್ನ ಆಲಿಂಗನವೆ ಪರಮೌಷಧ;
ಈ ಜನರ ಕಷ್ಟಗಳಿಗೆ, ಈ ಜಗದ ಸಮಸ್ಯೆಗಳಿಗೆ
ನಿನ್ನ ಗಮನವೇ ಸಿದ್ಧೌಷಧ;  ಎಂದು ಹೇಳುವ ಮೂಲಕ ಹೆಣ್ಣು, ಗಂಡಸಿನ ಬದುಕಲಿ ಎಷ್ಟು ಮುಖ್ಯ ಎಂದು ಹೇಳಿದ್ದೀರಿ. ಹೆಂಡತಿಯು ಹೆಂಡತಿ ಅಷ್ಟೇ ಅಲ್ಲ; ಚಿನ್ನ, ರಾಣಿ, ಶ್ರೀಮತಿ, ಸೌಭಾಗ್ಯವತಿ, ಪ್ರಾಣೇಶ್ವರಿ, ಗುರುಕೃಪೆ, ಮಹಾಮಾತೆ, ಜಗನ್ಮಾತೆ, ಆದಿಶಕ್ತಿ, ದೇವಿ, ಅನುತ್ತರಾ... ಹೀಗೆಲ್ಲಾ ಕರೆದಿದ್ದೀರಿ. ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಶ್ರೀರಾಮಕೃಷ್ಣ ಪರಮಹಂಸರು ತನ್ನ ಹೆಂಡತಿಯ ಪಾದಪೂಜೆ ಮಾಡಿ "ಜಗತ್ಮಾತೆ" ಎಂದಿದ್ದರಂತೆ. ಇದನ್ನು ನೀವು ಈ ಕವಿತೆಗಳ ಮೂಲಕ ಮಾಡಿದ ಎರಡನೆಯವರು ಎಂದು ನನಗೆ ಅನಿಸುತ್ತದೆ.

ಸಂಸಾರ ಸಾಗರದಿ ಮುಳುಗಿ ತೇಲುವ ನನ್ನ ಬೆನ್ಗೆ ಬೆಂಡಾಗಿ;
ಅಜ್ಞಾನ ಲೀಲೆಗೊಪ್ಪುತೆ ನನ್ನನುದ್ಧರಿಸಲೆಂದನ್ನ ಅರ್ಧಾಂಗಿಯಾಗಿ;
ಜನ್ಮ ಜನ್ಮದಲಿ ಕೃಪೆದೋರಿ ಬೆಂಬಿಡದ ನಾವೆಯಾಗಿ; ನಮ್ಮ ಜೊತೆ ಬರುವವಳು.
ತನ್ನ ಜೀವನವೆಲ್ಲ ಸೂರೆನೀಡಿ,
ನನ್ನ ಜೀವವನೆಲ್ಲ ಸೂರೆಮಾಡಿ,
ಆನಂದದಲಿ ತೇಲಾಡಿ,
ಬಂಧನದೊಳೋಲಾಡಿ ನನ್ನನ್ನೊಪ್ಪಿ, ಬಿಗಿದಪ್ಪಿ ಬರುವವಳು. ಹಾಗಾಗಿ ನನ್ನ ಪ್ರಾರ್ಥನೆ ಸದಾ ನಿನ್ನ ರಕ್ಷೆಯಾಗಿರಲಿ, ನಿನ್ನನಗಲುವುದು ನನಗೆ ಶಿಕ್ಷೆಯಾಗಿರಲಿ, ನಿನ್ನ ಕ್ಷೇಮದ ಚಿಂತೆ ನನಗೆ  ಸದಾ ಚುಚ್ಚುಮುಳ್ಳಾಗಿರಲಿ ಎಂದು ಹೆಳುತ್ತಾ ನಾನು ನಿನಗೆ, ನೀನು ನನಗೆ ಸದಾ ಇರಲಿ ಎಂದು ಹೇಳಿದ್ದೀರಿ.
ಸಂಸಾರದ ರಣರಂಗದಲ್ಲಿ ಇವಳೆ ನನ್ನ ಕೋಟೆ, ಕುಟುಂಬದ ಬೇಹಾರದ (ವ್ಯಾಪಾರದಲ್ಲಿ) ಇವಳು ನನ್ನ ಪೇಟೆ (ಸಂತೆ), ಯಾರು ಪುರಸ್ಕರಿಸಲಿ, ತಿರಸ್ಕರಿಸಲಿ, ಹೊಗಳಲಿ, ತೆಗಳಲಿ, ಲೋಕ ತೊರೆದು ಬಿಟ್ಟರೂ, ಕೊಟ್ಟ ಕೊನೆಗೆ ನನಗೆ ನೀನು, ನಿನಗೆ ನಾನು ಎಂದು ಹೇಳುವ ಮೂಲಕ ಹೆಂಡತಿಯ ಮಹತ್ವವನ್ನು ತಿಳಿಸಿದ್ದೀರಿ.
ನಿನಗೆ ಅದೊಂದು ಉಪಾಂಗ
ನನಗೋ ತರಂಗ!
ನಿನಗೆ ತೊಗಲ ಜಘನ್ಯಸ್ಥಾನ
ನನಗೋ ಆನಂದಸಾಗರ ಉದ್ಯಾನ!
ನಿನಗೆ ಸಂಸಾರ ಮಾಯಾಬಂಧನ
ನನಗೋ ರಸತಪೊನಂದನ! ಎಂದು ಹೇಳುತ್ತ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದನ್ನು ವಿವರಿಸಿದ್ದೀರಿ.

ಪುರುಷನ ಸಾಧನೆ ಹಿಂದೆ ಸ್ತ್ರೀಯ ಶ್ರಮವಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ನಾವು ಎಷ್ಟೇ ಬಿರುದು-ಸನ್ಮಾನ, ಜಗತ್ಪ್ರಸಿದ್ದಿ ಪಡೆದರೂ ನಾಕದಲಿ (ಸ್ವರ್ಗದಲ್ಲಿ) ಹೆಂಡತಿಯ ಗಂಡ ಎಂದು ಹೇಳಿದಾಗಲೇ ನಾಕದ ಬಾಗಿಲು ತೆರೆಯುವುದು ಎನ್ನುವ ಅಮೋಘ ಕವಿತೆಯ ಮೂಲಕ ಪ್ರತಿ ಗಂಡಸಿಗೂ ಹೆಂಡತಿಯ ನೆನಪು ಮಾಡಿದ್ದೀರಿ.
ನಿನ್ನ ಮೈ ಮೈದಾನದಲ್ಲಿ ನಾನು ಕ್ರೀಡಾಪಟು
ನಿನ್ನ ವಕ್ಷಶೃಂಗಾಶ್ರಮದಿ ನಾ ತಪಂಗೈವ ವಟು
ನಿನ್ನ ಅಂಗವೆಲ್ಲವೂ ನನ್ನ ಆನಂದಕುಟಿ
ಎಲ್ಲಿ ಆಸ್ವಾದಿಸಿದರಲ್ಲಿ ಸಕ್ಕರೆ
ಎಲ್ಲಿ ಅಘ್ರಾಣಿಸಿದರಲ್ಲಿ ಮಲ್ಲಿಗೆ
ಎಂದು ಹೆಂಡತಿಯನ್ನು ಬಯಸುವ ಪರಿ ನಿಜಕ್ಕೂ ಮೆಚ್ಚುವಂಥದ್ದು.
ಯಾರು ಕೈ ಬಿಟ್ಟರೂ ನೀ ಬಿಡದಿರು.
ನೀ ನನ್ನ ತಾಯ್ ತಂದೆ, ಗುರು ದೇವರು! ಎಂದು ಹೆಂಡತಿಗೆ ಹೇಳಬೇಕಾಗಿದೆ.

ನೀನಿರಲು ನನ್ನೊಡನೆ ಹೆದರಿಕೆ ಏಕೆ? ಸದಾ ಜೊತೆಯಿರಲು ನನಗೆ ಅನ್ಯರೇಕೆ? ಜನ್ಮ ಜನ್ಮದ ಸಂಗಾತಿಯಾಗಿ ಬರಲು ನೀನು, ಕ್ಲೇಶಕಷ್ಟಕ್ಕೆ ಹಿಂಜರಿಯನು ಎಂದು ಗಂಡ ಹೆಂಡತಿಗೆ ಹೇಳುವ ಮೂಲಕ ಆಕೆಯನ್ನು ಬಯಸಬೇಕಾಗಿದೆ.
ನೀನು ಆರು ಕಾಸು,ನಾನು ಮೂರು ಕಾಸು.
ಸೇರಿದರೆ ಕೋಟಿ ರೂಪಾಯಿ!
ನೀ ತರುವುದಲ್ಪ ನಾ ತರಲು ಸ್ವಲ್ಪ
ನಾಚುವುದು ಕಲ್ಪ (ಬ್ರಹ್ಮಾಂಡ)!
ನೀ ಆಸರ ನಾ ಬೇಸರ ಸೇರಿದರೆ
ಆನಂದ ಕಾಸಾರ (ಸರೋವರ)! ಹೀಗೆ ಹೊಂದಿಕೊಂಡರೆ ಸಂಸಾರ ಪೂರ್ಣವಾಗುವುದು ಎಂದು ಹೇಳಿದ್ದೀರಿ.
ನಿನ್ನ ಹಣೆಯ ಕುಂಕುಮ ರಕ್ಷೆ ನನಗಿರಲು ನಲ್ಲೆ
ಯಾವ ಅಪಾಯದ ಭೀತಿ ನಮಗಿಲ್ಲ ಬಲ್ಲೆ
ಬಂಧಿಸಿರೆ ನನ್ನನೀ ನಿನ್ನ ಚಿನ್ನದ ಕೊರಳ ಮಾಂಗಲ್ಯ ದೀಕ್ಷೆ
ನಮಗಿರದೆ ಸರ್ವದಾ ಶಿವೆಯ ಶಿವರಕ್ಷೆ? ಎಂದು ಹೇಳುತ್ತಾ ಹಣೆಯಲ್ಲಿ ಕುಂಕುಮ, ಮೂಗಲ್ಲಿ ಮೂಗುತಿ, ಕೊರಳಲ್ಲಿ ಮಾಂಗಲ್ಯ, ಪಕ್ಕದಿ ಮಲಗಿದೆ ತ್ರಿಜಗನ್ಮಾತೆಯ ವಕ್ಷದ ವಾತ್ಸಲ್ಯ!
ಪ್ರೇಯಸಿ? ಸಹಧರ್ಮಿಣಿ ? ಹೆಂಡತಿ? ತಾಯಿ?
ಲೌಕಿಕ ಸಂಬಂಧಕೆ ತೊದಲಿತೊ ಬಾಯಿ! ಎಂದು ಹೇಳುವ ಮೂಲಕ ಇವೆಲ್ಲವೂ ಹೆಂಡತಿಯೇ ಆಗಿರಲಿ, ಸಂಸಾರ ಸುಖವಾಗಿರಲಿ. ಎಂದು ನಿಮ್ಮ ಬರಹದಂತೆ ಓದಿದ ನಮಗೆ ನಮ್ಮ ಹೆಂಡತಿಯ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಿದೆ ಎಂದು ತಿಳಿಯಬಯಸುತ್ತೇನೆ.

ಇಂತಿ ನಮಸ್ಕಾರಗಳು
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -560056
ಮೊಬೈಲ್ ನಂ:9739758558