ಬರದನಾಡಿಗೆ ಹರಿದ ಭದ್ರಾ ಗಂಗೆ :ಹಾಲಿ ಮಾಜಿ ಶಾಸಕರುಗಳು ವೀಕ್ಷಣೆ ಸಂಭ್ರಮ

ಬರದನಾಡಿಗೆ ಹರಿದ ಭದ್ರಾ ಗಂಗೆ :ಹಾಲಿ ಮಾಜಿ ಶಾಸಕರುಗಳು ವೀಕ್ಷಣೆ ಸಂಭ್ರಮ

ಜಗಳೂರು:ಪಟ್ಟಣದ ಕೆರೆಗೆ 57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಮೂಲಕ ನೀರು ಹರಿದು ಬರುತ್ತಿದ್ದು.ಹಾಲಿ ಮಾಜಿ ಶಾಸಕರುಗಳು ವೀಕ್ಷಿಸಿ ಸಿಹಿಹಂಚಿ ಸಂಭ್ರಮಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,'ಇಂದು ತಾಲೂಕಿನ 30 ಕೆರೆಗಳಿಗೆ ನೀರು ಹರಿಯುತ್ತಿರುವುದರಲ್ಲಿ ಕೇವಲ ನನ್ನದು ಪಾತ್ರ ಮಾತ್ರವಲ್ಲ. ಮಾಜಿ ಶಾಸಕರಾದ ಎಚ್.ಪಿ.ರಾಜೇಶ್,ಎಸ್.ವಿ.ರಾಮಚಂದ್ರ ಅವರ ನಿರಂತರ ಶ್ರಮ ಹಾಗೂ ಸಿರಿಗೆರೆ ಶ್ರೀಗಳ ಆಶೀರ್ವಾದವಿದೆ.ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಯಂತೆ ನೀರಾವರಿ ಕನಸಿನ ಮೊದಲ ಪ್ರಯತ್ನದಿಂದ ದಿಟೂರಿನಿಂದ ಚಟ್ನಹಳ್ಳಿ ಗುಡ್ಡದ ಮೂಲಕ ಕ್ಷೇತ್ರದ 30ಕೆರೆಗಳಿಗೆ ನೀರು ಹರಿಯುತ್ತಿದೆ.ಹಂತಹಂತವಾಗಿ 57 ಕೆರೆಗಳಿಗೂ ಹರಿಸಲಾಗುವುದು.ಸಂಬಂಧಿಸಿದ ಇಂಜಿನಿಯರ್ ಗಳ ಬಳಿ ಈಗಾಗಲೆ ಚರ್ಚಿಸಲಾಗುವುದು.ನಂತರ ಭದ್ರಾ ಡ್ಯಾಂ ನೀರಿನ‌ ಹರಿವು ಕಡಿಮೆಯಾದ ನಂತರ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ತೆರಳಲಾಗುವುದು. ಪಕ್ಷಾತೀತವಾಗಿ ಆಗಮಿಸಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಬೇಕು' ಎಂದು ಮನವಿಮಾಡಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,'57 ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲು ಪಕ್ಷಾತೀತ ಆಡಳಿತ ಸರ್ಕಾರಗಳ ಕಾಳಜಿಯಿಂದ ಸಕಾಲದಲ್ಲಿ ಅನುದಾನ ಬಿಡುಗಡೆಗೊಂಡ ಪರಿಣಾಮ ಇಂದು ಕೆರೆಗಳಿಗೆ ಗಂಗೆ ಹರಿದುಬರುತ್ತಿದ್ದಾಳೆ.ನನ್ನ ಆಡಳಿತಾವಧಿಯಲ್ಲಿ ಸಿರಿಗೆರೆಶ್ರೀಗಳ ಮಾರ್ಗದರ್ಶನದಂತೆ ಆಡಳಿತ ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತಿದ್ದೆ.ಇದೀಗ ಹಾಲಿ ಶಾಸಕರು ಅಧಿವೇಶನದಲ್ಲಿ 57 ಕೆರೆ ತುಂಬಿಸುವ ಯೋಜನೆಯಡಿ ಶೀಘ್ರ ನೀರು ಹರಿಸಲು ಧ್ವನಿಯಾಗಿ ರೈತಪರ ಕಾಳಜಿ ಎತಿಹಿಡಿದಿರುವುದು ಪ್ರಶಂಸನೀಯ'ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,'ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಕೈಗೊಂಡ ನಿರ್ಣಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಆಡಳಿತಾವಧಿಯಲ್ಲಿ ₹250 ಕೋಟಿ ಹಣ ಬಜೆಟ್ ನಲ್ಲಿ ಮೀಸಲಿಟ್ಟರು.ಆಗ ನಾನು ಹಾಗೂಮಾಜಿ ಸಚಿವ ಎಚ್.ಆಂಜನೇಯ ಮತ್ತು ಮಾಜಿ ನೀರಾವರಿ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು.ನಂತರ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ,ಯಡಿಯೂರಪ್ಪ ಅವರ ಸಹಕಾರದಿಂದ ತಾಲೂಕಿನ 46 ಹಾಗೂ ವಿಧಾನಸಭಾ ಕ್ಷೇತ್ರದ 11ಕೆರೆಗಳನ್ನೊಳಗೊಂಡಂತೆ ಒಟ್ಟು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿವರೆಗೂ ಅನುದಾನ ಏಕಕಾಲಕ್ಕೆ ಬಿಡುಗಡೆಗೊಳಿಸಿದ್ದರ ಫಲವಾಗಿ ತಾಲೂಕಿನ ಕೆರೆಗಳು ಶೀಘ್ರ ಭರ್ತಿಯಾಗಲಿವೆ' ಎಂದು ಹೇಳಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಮುಖಂಡರಾದ ಸಿದ್ದೇಶ್,ಡಿ.ವಿ.ನಾಗಪ್ಪ,ಎಎಂ ಮರುಳಾರಾಧ್ಯ,ಕೆಳಗೋಟೆ ಅಹಮ್ಮದ್ ಅಲಿ,ಗಡಿಮಾಕುಂಟೆ ಸಿದ್ದೇಶ್,ರಂಗನಾಥ್ ರೆಡ್ಡಿ,ಬಸವರಾಜ್,ಓಬಳೇಶ್,ಹನುಮಂತಪ್ಪ,ಸೇರಿದಂತೆ ಇದ್ದರು.