ಭಾವಕ್ಕೊಂದು ಬರಹ.
ಅತ್ತ ಇತ್ತ ಸುತ್ತ ಮುತ್ತ ಎಲ್ಲಾ ನೋಡಿದೆ ದೊರೆ. ನಿನ್ನಷ್ಟು ಅದ್ಭುತ ನನಗ್ಯಾವುದು ಸಿಗಲೇ ಇಲ್ಲ. ಕಾರಣ ಮನಸ್ಸು ಪೂರ್ತಿ ನಿನ್ನ ಅಕ್ಷರಗಳ ಅಚ್ಚೆಯೇ ಹಚ್ಚ ಹಸಿರಾಗಿರಲು ಇನ್ಯಾವ ಪ್ರಕೃತಿಯ ಪ್ರೀತಿ ನನ್ನ ಪರಿವರ್ತನೆ ಮಾಡಲಾರದು. ನಿನ್ನ ಅಗಣ್ಯ ಅಲಂಕಾರಗಳು ನನ್ನ ಸದ್ದಿಲ್ಲದೆ ಶೃಂಗರಿಸಿದ ಆ ನೆನಪಿನ ಸುಮಧುರ ಸಲ್ಲಾಪಗಳು ಇನ್ನೂ ಕೂಡ ಸಂಗೀತದಂತೆ ಸ್ಥಿಗ್ಧವಾಗಿದೆ.
ಲೋಕ ಹೇಳುವಂತೆ ಪ್ರೀತಿ ಪ್ರೇಮ ತ್ಯಾಗ ಕಾಮ ಮೋಹ ಈ ಪದಗಳೆಲ್ಲಾ ನನ್ನ ಮುಂದೆ ನಿಂತು ಪ್ರಶ್ನಿಸಿದರೂ ಮನಸಿಗೆ ಬರುವುದೊಂದೇ ಖಯಾಲಿ ಅದು ಪವಿತ್ರತೆಗೆ ಸೀಮಿತವಾದ ನಿನ್ನ ಬರಹ ಸೌಂಧರ್ಯ. ಎಲ್ಲವನ್ನು ಕೂಡಿಟ್ಟುಕೊಂಡು ಪೋಷಿಸುತ್ತಾ ಇರುವ ನನ್ನಿರುವಿಕೆಗೆ ಉಸಿರು ನೀನೇ... ಜೀವಿಸಲು ಗಾಳಿ ಬೇಕಂತೆ ಸತ್ಯ. ಆದರೆ ಅದರಷ್ಟೇ ಪ್ರಿಯವಾದದ್ದು ಇದೆ ಎಂದರೆ ಇವಾರ್ಯಾರು ನಂಬೋಲ್ಲ.
ನಿನ್ನ ಮೊಗವನ್ನು ಬೊಗಸೆಯಲ್ಲಿ ಹಿಡಿದು ಅತೀ ತಾಳ್ಮೆಯಿಂದ ಬಿಟ್ಟು ಬಿಡದಂತೆ ನೋಡುತ್ತಾ, ನಿನ್ನ ಆ ಕಣ್ಣುಗಳಲ್ಲಿ ಕೂಡಿಟ್ಟ ಸಾವಿರಾರು ಕಲ್ಪನೆಗಳ ಕವಿತೆಯನ್ನು ನಾನೊಬ್ಬಳೇ ಕುಳಿತು ವರ್ಷಗಳು ಉರುಳುತ್ತಾ ಹೋದಂತೆಲ್ಲಾ ಓದಬೇಕು. ಸಾವೆಂಬ ಮಣ್ಣಿನ ಗೋರಿಯೊಳಗೂ.! ಹು..., ಅಂತ್ಯವೆಂಬುದು ಆತ್ಮಕ್ಕೆ ಇಲ್ಲ. ಅಲ್ಲವೇ...? ನಿಶಬ್ದತೆಯಲ್ಲಿ ನನ್ನ ಧ್ವನಿಗೆ ಕಿವಿಗೊಟ್ಟು ಕೇಳುವ ನಿನ್ನ ಮೌನವನ್ನು ಕೂಡ ಬಾಚಿ ನನ್ನೊಳಗೆ ಬಂಧಿಸಬೇಕು. ಬಚ್ಚಿಟ್ಟು ಈ ಓದುಗಳಿಗಾಗಿ ನಿನ್ನ ವಿಶೇಷ ಭಾವವಿರಬೇಕು.
ಹು.ಹು...ಹು...!! ಸಾಲದು...
ಸಾಲು ಸಾಲು ಗೀಚಿ ಮುಗಿದರೂ ಸಾಲದು. ಓದಿ ಮುಗಿಸುವಷ್ಟು ಆತುರ ನನಗಿಲ್ಲ. ಆದರೆ ಕೊಂಚ ಅತೀ ಆಸೆ. ಹು. ಗೊತ್ತು ಆಸೆಯೇ ದುಃಖ್ಖಕ್ಕೆ ಮೂಲ. ಈ ದುಃಖ್ಖವೂ ಕೂಡ ಅದೆಷ್ಟು ಹಿತವಾಗಿದೆ ಗೊತ್ತಾ..? ಬಹುಷಃ ವಿವರಿಸಲು ಮತ್ತು ವಾದ ಮಾಡಲು ನೀನು ಎದುರಿಗೆ ಇಲ್ಲ ಎನ್ನುವ ವಾಸ್ತವತೆಗೆ ರುದ್ರಾಗ್ನಿ ಸದಾ ಹೊತ್ತಿಕೊಳ್ಳುತ್ತಿದ್ದಾಳೆ. ಸಾಧ್ಯವಾದ್ರೆ ಒಮ್ಮೆ ನನ್ನದೇ ಕರೆಯ ಸಂಖ್ಯೆಗಳ ಮೇಲೆ ಸುಮ್ಮನೆ ಕೈಯಾಡಿಸು. ಇಲ್ಲಿ ನಾ ಕುಳಿತಲ್ಲೇ ಘಮಿಸುವೆ. ನಿನ್ನ ಜ್ಞಾಪಕದ ಜಾತ್ರೆಗೆ ನನ್ನ ಪದಗಳ ಮೆರವಣಿಗೆ ಹೊರಟು ನಾನೇ ಪಲ್ಲಕ್ಕಿಯ ದೇವಿಯಾಗುವೆ. ಪೂಜಿಸಲು ನೀನೇ ಪೂಜಾರಿಯಾಗಿದ್ದ ಕವಿತೆ ಮಾತ್ರ ಮರೆಯದಿರು...
ರುದ್ರಾಗ್ನಿ
(ಡಾ. ಶ್ರುತಿ ಮಧುಸೂದನ್. ಉಪನ್ಯಾಸಕರು. ಅಕ್ಷರನಾದ.)