ಮಳೆ ಮತ್ತು ಮಾನವ

ಮಳೆ ಮತ್ತು ಮಾನವ
"ಮಾಡಿದ್ದುಣ್ಣೋ ಮಹಾರಾಯ" ಎನ್ನುವ ಗಾದೆಯನ್ನು ನಾವೆಲ್ಲರೂ ಕೇಳಿದ್ದೇವೆ ಮಾನವ ತಾನು ಏನು ಮಾಡುತ್ತಾನೋ ಅದರ ಸತ್ಫಲ ಅಥವಾ ದುಷ್ಫಲ ಗಳನ್ನು ತಾನು ಉಣ್ಣಲೇಬೇಕು 
 ಇತ್ತೀಚೆಗೆ ಸ್ವಲ್ಪ ಮಳೆ ಬಂದರೆ ಸಾಕು ನಗರದ ರಸ್ತೆಗಳು ನದಿಯಂತಾಗುವುದು ಓಡಾಡಲು ಆಗದಂತ ಅವತಾರ ಸೃಷ್ಟಿಯಾಗಿ ರೈಲ್ವೆ ಕೆಳಸೇತುವೆಗಳ ಕೆಳಗೆ ನಿಂತವರು ಮತ್ತು ವಾಹನಗಳು ಕೊಚ್ಚಿಕೊಂಡು ಹೋದ ಘಟನೆಗಳನ್ನು ನೋಡಬಹುದು. ಇನ್ನೂ ಸ್ವಲ್ಪ ಮಳೆ ಹೆಚ್ಚಾದರೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗುವುದನ್ನು ಕಾಣಬಹುದು.
ಹೊಲ ತೋಟಗಳಿಗೆ ನೀರು ನುಗ್ಗಿ ಬೆಳೆ ಹಾನಿಯಂತ ಅವಾಂತರ ಸೃಷ್ಟಿಯಾಗುವುದನ್ನು ನೋಡಬಹುದು.
ಪರ್ವತ ಶ್ರೇಣಿಗಳಲ್ಲಿ ಸಾಧಾರಣ ಮಳೆಯಾದರೆ ಸಾಕು ಸಾಲು ಸಾಲು ಗುಡ್ಡ ಕುಸಿತವಾಗುವುದನ್ನು ನೋಡುತ್ತಲೇ ಇದ್ದೇವೆ. 
ನದಿಗಳಲ್ಲಂತು ನೀರು ಹರಿಯುವ ಬದಲು ಬೆಟ್ಟ ಗುಡ್ಡಗಳ ಕಲ್ಲು ಮಣ್ಣುಗಳು ಹರಿಯುವುದನ್ನು ಕಾಣುತ್ತಿದ್ದೇವೆ.  
 ಇದೇ ಕಾರಣದಿಂದ ಮಳೆಗಾಲ ಪ್ರಾರಂಭವಾದರೆ ಸಾಕು ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಜನರು ಮತ್ತು ಬೆಟ್ಟಗುಡ್ಡಗಳ ಮೇಲೆ  ರಸ್ತೆಗಳಲ್ಲಿ ಓಡಾಡುವ ಜನರು ಜೀವವನ್ನು ಕೈಯ್ಯಲ್ಲಿಡಿದುಕೊಂಡು ಓಡಾಡಬೇಕಾಗುತ್ತದೆ. 
 ಗುಡ್ಡ ಕುಸಿತವಾದರೆ ರಸ್ತೆಗಳೇ ಮಾಯವಾಗಿ ಗ್ರಾಮಗಳೇ ಕಣ್ಮರೆಯಾಗುವುದನ್ನು ನಾವು ಕಾಣಬಹುದು. 
 ಮನೆ, ಮರ, ಗಿಡ, ರಸ್ತೆ, 
 ಯಾವುದನ್ನು ಬಿಡದಂತೆ ಗುಡಿಸಿಕೊಂಡು ಹೋಗಿರುವ ಘಟನೆಯನ್ನು ನಾವು ಕಣ್ಣಾರೆ ಕಾಣಬಹುದು. 
 ಇತ್ತೀಚೆಗೆ ಕರ್ನಾಟಕದ  ಶಿರೂರಿನಲ್ಲಿ ಗುಡ್ಡಕುಸಿತವಾಗಿ ಹತ್ತಾರು ವಾಹನಗಳು, ಒಂದು ಕುಟುಂಬ,  ಮನೆ, ಹೋಟೆಲ್, ಕೊಚ್ಚಿ ಹೋಗಿದ್ದನ್ನು ನಾವು ನೋಡಿದ್ದೇವೆ ಜೊತೆಗೆ ವಾಹನದಲ್ಲಿದ್ದವರು ಮತ್ತು  ಹತ್ತಾರು ಜನ ಕಣ್ಮರೆಯಾದದ್ದನ್ನೇ ಘೋರ ಘಟನೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಘನ ಘೋರ ದುರಂತವೊಂದು ಕೇರಳದ ವಯನಾಡಿನಲ್ಲಿ ನಡೆದೇ ಹೋಯಿತು. ಇಲ್ಲಿ ಉಂಟಾದ ಗುಡ್ಡ ಕುಸಿತದಿಂದ ಸಾವಿರಾರು ಜನ ಮನೆ ಮಠ ಕಳೆದುಕೊಂಡರು. ಮನೆಗಳು ಇದ್ದವು ಎಂಬ ಕುರುಹು ಇಲ್ಲದಂತಾಗಿ ನೂರಾರು ಜನ ಸಾವನ್ನಪ್ಪಿದ್ದನ್ನು ನಾವು ನೋಡಬಹುದಾಗಿದೆ. 
ಮಣ್ಣಿನೊಳಗೆ ಹೂತುಹೋದ ವೃದ್ಧರು ಮಕ್ಕಳು ಎನ್ನದೆ ಶವಗಳನ್ನು  ಹೊರತೆಗೆಯುವ ದೃಶ್ಯಗಳನ್ನು ನೋಡುತ್ತಿದ್ದರೆ ಹೃದಯ ಸ್ತಬ್ದವಾಗಿಬಿಡುತ್ತದೆ. ವರುಣನ ಆರ್ಭಟಕ್ಕೆ ಭೂತಯಿ ನಮ್ಮನ್ನು ರಕ್ಷಿಸಿಕ್ಕೊಲ್ಲಲು ಅಗಾದಷ್ಟು ಅಬಲೆಯಾದಳೇ?
ಅಥವಾ ಮಾನವನ ತಪ್ಪಿಗೆ ಮುನಿದು ಪ್ರಕೃತಿ ಮಾತೆ ಈ ಶಿಕ್ಷೆ ನೀಡುತ್ತಿದ್ದಾಳೆಯೇ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.
 ಮಳೆಗಾಲ ಪ್ರಾರಂಭವಾಯಿತು ಎಂದರೆ ಸಾಕು ಎಲ್ಲಿ ನೋಡಿದರೂ ಗುಡ್ಡ ಕುಸಿತದ್ದೇ ಸುದ್ದಿ. 
 ಧಾರಾಕಾರವಾಗಿ ಸುರಿಯುವ ಮಳೆಗೆ ಎಲ್ಲಂದರಲ್ಲಿ ಗ್ರಾಮಗಳು ಜಲಾವೃತವಾಗುವುದು 
 ರಸ್ತೆಯಲ್ಲಿ ವಾಹನಗಳು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿ ಮನುಷ್ಯರು ಮತ್ತು ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುವುದು, ರೈಲು ಮತ್ತು ವಿಮಾನ ಹಾರಾಟಕ್ಕೂ ತೊಂದರೆಯಾಗುವಂತಹ ಸ್ಥಿತಿ ನಿರ್ಮಾಣವಾಗಿ ವಿಮಾನ ನಿಲ್ದಾಣಗಳು ಕೂಡ ಜಲಾವೃತವಾಗುವುದನ್ನು ನಾವು ಕಾಣಬಹುದಾಗಿದೆ. 
 ಗುಡ್ಡ ಕುಸಿತು ಮತ್ತು ಮಳೆಯ ಅವಾಂತರಗಳಿಗೆ ಕಾರಣ ಮಳೆಯೋ?ಮಾನವನೋ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದಾಗ 
 ಅಂತಿಮವಾಗಿ ಇದಕ್ಕೆ ಮಳೆಯಲ್ಲ ಮಾನವನೇ ಕಾರಣ ಎಂಬುದು ನಮಗೆ ಖಾತ್ರಿಯಾಗುತ್ತದೆ.
 ಮಾನವನ ವೈಜ್ಞಾನಿಕ ಬೆಳವಣಿಗೆ ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಆತುರದಲ್ಲಿ ತಾನು ಮಾಡಿಕೊಂಡ ಅವಾಂತರ ಕಾರಣವಾಗಿದೆ. 
 ವೈಜ್ಞಾನಿಕ ಅಭಿವೃದ್ಧಿಗಳು ಬೆಳೆದಂತೆಲ್ಲ ಇವನ ಜೀವನಮಟ್ಟ ಬದಲಾಗುತ್ತಾ ಹೋಗುತ್ತದೆ.
ಅಗತ್ಯ ವಸ್ತುಗಳನ್ನಾಗಲಿ  ದೂರದಲ್ಲಿರುವ ಊರುಗಳಿಗೆ ತೆರಳಲು ವ್ಯಾಪಾರ ವ್ಯವಹಾರಗಳಿಗೆ ಅತ್ತಿಂದಿತ್ತ ಮಾನವ ಓಡಾಡಲೇಬೇಕಾಗುತ್ತದೆ. ಈ ರೀತಿ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ರಸ್ತೆ ಮಾರ್ಗ ಬೇಕಾಗುತ್ತದೆ. ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ ಗುಡ್ಡಗಳನ್ನು ಕಡಿದು ಸಮತಲಗೊಳಿಸಿ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಗುಡ್ಡದ ಮೇಲ್ಭಾಗ ಸಮತಲವಾಗಿರುವುದಿಲ್ಲ ನೈಸರ್ಗಿಕವಾಗಿ ಗುಡ್ಡಗಳ ರಚನೆ ಚೂಪಾದ ತುದಿಯನ್ನು ಹೊಂದಿರುತ್ತದೆ.
 ಮಾನವನು ತನ್ನ ಅನುಕೂಲಕ್ಕೆ ತಕ್ಕಂತೆ ಹಲವಾರು ಕಾರಣಗಳಿಗೆ ಗುಡ್ಡಗಳನ್ನು ಸಮತಲ ಮಾಡುವುದು ತೋಟಗಾರಿಕೆ, ಹೋಟೆಲ್, ರೆಸಾರ್ಟ್, ಸ್ಟೇಹೋಗಳಂತಹ ಕಟ್ಟಡ ಕಟ್ಟಲು ಗುಡ್ಡಗಳ ಮೇಲೆ ವಿಶಾಲವಾದ ಪ್ರದೇಶವನ್ನು ನಿರ್ಮಾಣ ಮಾಡಿಕೊಂಡು ಬೆಟ್ಟದ ಮೇಲ್ಭಾಗದಲ್ಲಿ ಕಟ್ಟಡಗಳನ್ನು ಕಟ್ಟುತ್ತಾ ಹೋದಂತೆ ಅಲ್ಲಿ ಮಳೆಯ ನೀರು ಹೆಚ್ಚಾಗಿ ಹೀರಿಕೊಳ್ಳುವುದು ಮತ್ತು ಗುಡ್ಡದ ಮಣ್ಣು ಹೆಚ್ಚು ತೇವವಾಗಿ ಭಾರವಾಗಿ ಮೇಲ್ಭಾಗದಿಂದ  ಗುರುತ್ವಾಕರ್ಷಣ ಬಲದ ಆಧಾರದ ಮೇಲೆ ಕೆಳಮುಖ ಒತ್ತಡ ಹೆಚ್ಚುತ್ತಾ ಹೋಗುತ್ತದೆ. 
ಒತ್ತಡ ಹೆಚ್ಚಾಗುವುದರಿಂದ ಪಕ್ಕದಲ್ಲಿ ಯಾವುದೇ ಆಧಾರವಿಲ್ಲದ ಕಡೆಗೆ ಜಾರಲು ಪ್ರಾರಂಭವಾಗುತ್ತದೆ.
ಹೆಚ್ಚು ಹೆಚ್ಚು ಒತ್ತಡದಿಂದ ಒಮ್ಮೆ ಸ್ವಲ್ಪ ಮಣ್ಣು ಜಾರಲು ಪ್ರಾರಂಭವಾದರೆ   ತನ್ನ ಎದುರಿಗೆ ಸಿಕ್ಕ ಎಲ್ಲಾ ವಸ್ತುಗಳನ್ನು  ಸೆಳೆದುಕೊಂಡು  ಹರಿಯುತ್ತಾ  ವೇಗವಾಗಿ ಬಂದು ಊರುಗಳಿರಬಹುದು, ರಸ್ತೆಗಳಿರಬಹುದು, ಮನೆ ಮಠ ಯಾವುದನ್ನು ಉಳಿಸದಂತೆ ಗುಡಿಸಿಕೊಂಡು ಹೋಗುತ್ತದೆ. ಇಷ್ಟೆಲ್ಲಾ ಅನಾಹುತಕ್ಕೆ ಮಳೆ ಕಾರಣ ಎಂಬುದಕ್ಕಿಂತ ಮನುಷ್ಯನೇ ಎಂದು ತೀರ್ಮಾನಿಸಬಹುದಾಗುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹಲವಾರು ರೀತಿಯಲ್ಲಿ ಬೆಟ್ಟ ಗುಡ್ಡಗಳನ್ನು ಕಡಿದು ಅಲ್ಲಿ ಹೆಚ್ಚು ನೀರು ಇಂಗುವಂತೆ ಮಾಡುವುದರ ಜೊತೆಗೆ ವಿಶಾಲವಾದ ಬಯಲು ನಿರ್ಮಾಣ ಮಾಡುವುದರಿಂದ ಅಲ್ಲಿ ಹೆಚ್ಚು ನೀರು ನಿಂತು ಹರಿಯುವಂತೆ ಮಾಡಿ ಗುಡ್ಡದ ಮಣ್ಣಿನಲ್ಲಿ ಹೆಚ್ಚು ತೇವಾಂಶ ಉಳಿಯುವಂತೆ ಮಾಡುತ್ತಾನೆ. ಈ ರೀತಿ ಆದಾಗ ಮಣ್ಣಿನ ಭಾರ ಹೆಚ್ಚಾಗುತ್ತದೆ. ಇದರಿಂದ ಗುಡ್ಡಕುಸಿತ ಗುಡ್ಡಕುಸಿತದಿಂದ ಜೀವ ಹಾನಿಗಳು ಉಂಟಾಗುತ್ತವೆ.
ಇದಕ್ಕೆ ನಿಜವಾದ ಕಾರಣ ಮಾನವನೇ ಆಗುತ್ತಾನೆ. ಎತ್ತರವಾದ ಶಿಖರ ಗುಡ್ಡ ಬೆಟ್ಟಗಳು ಇಳಿಜಾರಾಗಿಯೇ ಇರಬೇಕೆ ವಿನಃ ಸಮತಲವಲ್ಲ.
ಆದ್ದರಿಂದ ಮಾನವ ಬೆಟ್ಟ ಗುಡ್ಡಗಳ ರಚನೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಪ್ರಯತ್ನವನ್ನು ಬಿಡಬೇಕು.
 ಮಳೆ ಭೂಮಿ ರಚನೆಯಾದಾಗಿನಿಂದಲೂ ಸುರಿಯುತ್ತಲೇ ಇದೆ. ಇಂತಹ ಗುಡ್ಡ ಬೆಟ್ಟಗಳಲ್ಲಿ ಜನಗಳು ವಾಸ ಇರಲಿಲ್ಲ ಎಂದಲ್ಲ ಹಲವಾರು ವರ್ಷಗಳಿಂದ ಬುಡಕಟ್ಟು ಜನಾಂಗ,ಆದಿವಾಸಿಗಳು ವಾಸವಿದ್ದರೂ ಅವರು "ಪ್ರಕೃತಿಯ ಮೇಲೆ ವಿಕೃತಿ ಮೆರೆಯದೆ" ಪ್ರಕೃತಿ ಇದ್ದಂತೆ ಅದಕ್ಕೆ ಹೊಂದಿಕ್ಕೊಂಡು ಬದುಕುತ್ತಾ ಬಂದವರು. ಆಗ ಮನುಷ್ಯನ ಕಾರಣದಿಂದ ಗುಡ್ಡ ಕುಸಿತಗಳು ಆಗುತ್ತಿದ್ದುದು ಬಹಳ ವಿರಳ. ಇತ್ತೀಚಿಗೆ ಮಾನವ ಎಲ್ಲಾ ಬಯಲು ಪ್ರದೇಶವನ್ನು ಬಿಟ್ಟು ಬೆಟ್ಟಗುಡ್ಡಗಳಲ್ಲಿ ವಾಸ ಮಾಡಲು ಹೊರಟು 'ಪ್ರಕೃತಿಯನ್ನು ವಿಕೃತಿಗೊಳಿಸಿ' ಈ ರೀತಿ ಗುಡ್ಡ ಕುಸಿತಕ್ಕೆ ಕಾರಣವಾಗುತ್ತಿದ್ದಾನೆ. ಒಟ್ಟಾರೆಯಾಗಿ ಭೂಮಿಯಲ್ಲಿ ಆಗುವಂತ ದೊಡ್ಡ ದೊಡ್ಡ ದುರಂತಗಳಿಗೆ ಮಾನವನೇ ಪ್ರತ್ಯಕ್ಷ ಮತ್ತು ಪರೋಕ್ಷ  ಕಾರಣವಾಗಿದ್ದಾನೆ. ಮಳೆ ಬರಲೇಬೇಕು, ಮಳೆ ಬಂದರೆ ಇಳೆ, ಇಲ್ಲದಿದ್ದಲ್ಲಿ ಇಳೆ ಉಳಿಯಲು ಅಸಾಧ್ಯ. ಮಳೆ ಬಂದು ಗುಡ್ಡ ಕುಸಿದಿದೆ ಎಂದು ಮಳೆ ಬರಲೇಬಾರದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಾವು ಪ್ರಕೃತಿಯ ನೈಜ ಸ್ಥಿತಿಯನ್ನು ಅರಿತು ಅದನ್ನು ಇದ್ದ ಹಾಗೆ ಬಿಟ್ಟು ಬಾಳುತ್ತಾ ಹೋದರೆ ನಾವು ಮುಂದಿನ ದಿನಗಳಲ್ಲಿ ಈ ರೀತಿಯ  ಅವಘಡಗಳನ್ನು
ತಡೆಯಬಹುದು. ಮಾನವ ಎಷ್ಟೇ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ್ದರೂ ಕೂಡ ಪ್ರಕೃತಿಯ ಮುಂದೆ ತೃಣಕ್ಕೆ ಸಮಾನ. ಇದನ್ನು ಪ್ರಕೃತಿ ನಮಗೆ ತೋರಿಸಿ ಕೊಟ್ಟಿದೆ. ಇದನ್ನು ತಿಳಿದು ಮುಂದೆಯಾದರೂ ಪ್ರಕೃತಿಗೆ ವಿರುದ್ಧವಾಗಿ ಯಾವುದನ್ನು ಮಾಡಕೂಡದು ಎಂಬುದರ ಪಾಠವನ್ನು ಕಲಿತು ಬಾಳಬೇಕಾಗುತ್ತದೆ.
ಭೂಮಿಯನ್ನ 'ಧರಿತ್ರಿ' ಎಂದು ಹೇಳುತ್ತೇವೆ ಆದರೆ ಈ ಕ್ಷಮೆ ನೀಡುವ ಧರಿತ್ರಿ ನಮ್ಮನ್ನು ಇಷ್ಟು ಕಣ್ಣೀರು ಹಾಕುವಂತೆ ಮಾಡುತ್ತಿದ್ದಾಳೆ ಎಂದರೆ ಅವಳಿಗೆ ನಾವು ಕೊಟ್ಟಿರುವ ನೋವು ಎಷ್ಟಿರಬಹುದು...? ಎಂಬುದನ್ನು ನಾವೇ ಯೋಚಿಸಬೇಕಾಗುತ್ತದೆ.
*********************
✍️ಆನಂದ್ ಕಾಳೇನಹಳ್ಳಿ