ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾಗಿದ್ದ ನಕಲಿ ವೈದ್ಯನ ಬಂಧನ

ಹಲಗೂರು:ಅನಧಿಕೃತ ವಾಗಿ ಕ್ಲಿನಿಕ್ ನಡೆಸುತ್ತ ವ್ಯಕ್ತಿ ಯೊಬ್ಬನ ಸಾವಿಗೆ ಕಾರಣವಾದ ಆರೋಪದ ಮೇಲೆ ನಕಲಿ ವೈದ್ಯನೊಬ್ಬನನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕೃಷ್ಣಮೂರ್ತಿ ಎಂಬಾತನೇ ಬಂಧಿತ ಆರೋಪಿ ಯಾಗಿದ್ದು ಯಾವುದೇ ಪರವಾನಿಗೆ ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಈ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಎನ್ನಲಾಗಿದೆ.
ಕಳೆದ 2019 ರಲ್ಲಿ ದಡಮಹಳ್ಳಿ ಗ್ರಾಮದ ಶಿವಲಿಂಗೇಗೌಡ ಎಂಬುವರಿಗೆ ಈತ ನೀಡಿದ ಚುಚ್ಚುಮದ್ದಿನಿಂದ ಕೀವುಪೂರಿತ ಗಾಯವಾಗಿ ಆತ ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಸದರಿ ನಕಲಿ ವೈದ್ಯನ ವಿರುದ್ಧ ಮೊಕದ್ದಮೆ ದಾಖಲಾಗಿದ್ದು ಕ್ಲಿನಿಕ್ ಮೇಲೆ ಆಗ ದಾಳಿ ಮಾಡಿದ್ದ ಆರೋಗ್ಯಾಧಿಕಾರಿ ಗಳು ಸದರಿ ಕ್ಲಿನಿಕ್ ಗೆ ಬೀಗ ಮುದ್ರೆ ಹಾಕಿದ್ದರಾದರೂ ಹಿಂಬಾಗಿಲ ಮೂಲಕ ಈ ಕ್ಲಿನಿಕ್ ನಡೆಸುತ್ತಿದ್ದರು ಎನ್ನಲಾಗಿದೆ.
ಇದೀಗ ಮೃತ ಶಿವಲಿಂಗೇಗೌಡ ರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು ಈ ವರದಿಯಲ್ಲಿ ಚುಚ್ಚು ಮದ್ದು ನೀಡಿದ್ದ ಜಾಗದಲ್ಲಿ ಉಂಟಾದ ಗಾಯ ಉಲ್ಬಣಿಸಿ ಆತ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರ ಕ್ಲಿನಿಕ್ ಮೇಲೆ ಬುಧವಾರ ತಡರಾತ್ರಿ ಆರೋಗ್ಯಾಧಿಕಾರಿಗಳ ಸಮೇತ ದಾಳಿ ನಡೆಸಿರುವ ಹಲಗೂರು ಸಿಪಿಐ ಶ್ರೀಧರ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ವೀರಭದ್ರಪ್ಪ ಮತ್ತಿತರರು ಅಧಿಕಾರಿಗಳು ಹಾಜರಿದ್ದರು.