ಶ್ರದ್ಧಭಕ್ತಿಯಿಂದ ನಡೆದ ಪಾಂಡುರಂಗ ಸ್ವಾಮಿ ಬ್ರಹ್ಮ ರಥೋತ್ಸವ

ಬಾಗೇಪಲ್ಲಿ: ತಾಲೂಕಿನ ಕಸಬಾ ಹೋಬಳಿ ದೇವರಗುಡಿಪಲ್ಲಿ ಪುರಾಣ ಪ್ರಸಿದ್ಧ ಗಡಿದಂ ಬೆಟ್ಟದ ಸಮೀಪ ಇರುವ ಪಾಂಡುರಂಗ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಗೆ ಮತ್ತು ಹೊರಗೂ ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗಾರ ಮಾಡುವ ಮೂಲಕ ದೇವಸ್ಥಾನದ ಪ್ರಾಂಗಣದದಿಂದ ಹೂವಿನ ಅಲಂಕಾರ ಮಾಡಿದ್ದರು.
ವಿವಿಧ ಪೂಜಾ ಕೈಂಕರ್ಯಗಳ ಮೂಲಕ ರಥೋತ್ಸವಕ್ಕೆ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಆರಾಧನೆ, ನೈವೇದ್ಯ, ಹೋಮ, ಬಲಿ ಪ್ರದಾನ, ರಥ ಬಲಿ, ಮಹಾ ಮಂಗಳಾರತಿ ನೆರವೇರಿದವು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲಸ್ಥಾನಕ್ಕೆ ಆಗಮಿಸಿತು.
ಬ್ರಹ್ಮ ರಥೋತ್ಸವದ ಹಿನ್ನಲೆಯಲ್ಲಿ ಡೊಳ್ಳು ಕುಣಿತ, ತಮಟೆ ಸದ್ದು ಬ್ರಹ್ಮರಥೋತ್ಸವಕ್ಕೆ ಆಗಮಿಸಿದವರಿಗೆ ಉತ್ಸಾಹದ ತುಂಬಿದವು. ಹಾಗೇಯೆ ಇದು ಮಾಘಮಾಸದ ಮೊದಲ ಭಾನುವಾರ ನಡೆಯುವುದು ಮತ್ತೊಂದು ವಿಶೇಷವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಡೆಯುತ್ತಿದೆಯೆಂದ ಭಕ್ತಾಧಿಗಳು ಮಾಹಿತಿ ನೀಡಿದರು.
ಬ್ರಹ್ಮರಥೋತ್ಸವ ವೀಕ್ಷಿಸಲು ಬಂದಂತಹ ಮಕ್ಕಳಿಗೆ ಖುಷಿ ನೀಡುವ ಪುಟಾಣಿ ರೈಲು, ಜಿಯಂಟ್ ವೀಲ್ ಸೇರಿದಂತೆ ಹಲವು ರೀತಿಯ ಆಟೋಟಗಳು ಜಾತ್ರೆಗೆ ಕಳೆ ನೀಡಿದ್ದವು. ಹಾಗೇಯೇ ರಸ್ತೆಯ ಇಕ್ಕೆಲಗಳಲ್ಲಿ ಮಕ್ಕಳ ಆಟಿಕೆಗಳ ಮಳಿಗೆಗಳು ಜನಸಂದಣಿಯಿಂದ ಕೂಡಿದ್ದವು. ಕಡಲೇಪುರಿ,ಬತ್ತಾಸು ಸೇರಿದಂತೆ ಸಿಹಿ ತಿನಿಸುಗಳು, ಮಕ್ಕಳ ಆಟಿಕೆಗಳ ಮಳಿಗೆಗಳನ್ನು ತೆರೆಯಲಾಗಿತ್ತು.