ಹೀಲಿಯಂ ದ್ರವೀಕರಿಸಲು ಯಶಸ್ವಿಯಾದ ವಿಜ್ಞಾನಿ "ಹೈಕೆ ಕಮರ್ ಲಿಂಗ್ ಓನೆಸ್"

ಹೀಲಿಯಂ ದ್ರವೀಕರಿಸಲು ಯಶಸ್ವಿಯಾದ ವಿಜ್ಞಾನಿ "ಹೈಕೆ ಕಮರ್ ಲಿಂಗ್ ಓನೆಸ್"

ಅತಿ ಕಡಿಮೆ ಉಷ್ಣತೆಯನ್ನು ಸಾಧಿಸಿ, ವಸ್ತುವಿನ ಭೌತ ಗುಣಲಕ್ಷಣ ಆ ಸ್ಥಿತಿಯಲ್ಲಿ ವ್ಯತ್ಯಾಸಗೊಳ್ಳುತ್ತದೆ ಎಂದು ತೋರಿಸಿದವನು ಹೈಕೆ ಕಮರ್ ಲಿಂಗ್ ಓನೆಸ್. ಅತಿ ಶೈತ ಭೌತವಿಜ್ಞಾನ ಒಂದು ಪ್ರತ್ಯೇಕ ವಿಜ್ಞಾನವಾಗಿ ರೂಪುಗೊಳ್ಳುವುದಕ್ಕೆ ಆತ ಕಾರಣನಾದ. ಅದರ ಸಲುವಾಗಿ 1913ರ ಭೌತವಿಜ್ಞಾನದ ನೊಬೆಲ್ ಬಹುಮಾನ ಆತನಿಗೆ ಲಭಿಸಿತು.

1853ರ ಸೆಪ್ಟೆಂಬರ್ 21ರಂದು ಜರ್ಮನಿಯ ಗ್ರೋನಿಂಗೆನ್ ಎಂಬಲ್ಲಿ ಕಮರ್ ಲಿಂಗ್ ಓನೆಸ್ ಜನಿಸಿದ. ಗ್ರೋನಿಂಗೆನ್ ವಿಶ್ವವಿದ್ಯಾನಿಲಯದ ವ್ಯಾಸಂಗ ಮುಗಿದ ಮೇಲೆ 1871ರಲ್ಲಿ ಹೈಡಲ್ ಬರ್ಗ್ ಗೆ ಹೋಗಿ ಪ್ರಸಿದ್ಧ ವಿಜ್ಞಾನಿಗಳಾದ ರಾಬರ್ಟ್ ಬುನ್ ಸೆನ್ ಮತ್ತು ಗುಸ್ತಾವ್ ರಾಬರ್ಟ್ ಕೀರ್ಕ್ಆಫ್ ಇವರ ಮಾರ್ಗದರ್ಶನ ಪಡೆದ. 1882 ರಲ್ಲಿ ಲೀಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕ ಹುದ್ದೆ ಲಭಿಸಿತು.

ಕಿರಿದಾದ ಮಾರ್ಗದಿಂದ ಅನಿಲ ಹಾದು ಬರುವಂತೆ ಮಾಡಿ ತಾನೇ ತಾನಾಗಿ ವಿಕಾಸ ಹೊಂದುವಂತೆ ಮಾಡಿದರೆ ಅದು ಸ್ವಲ್ಪ ತಣ್ಣಗಾಗುತ್ತದೆ. ಈ ಪರಿಣಾಮವನ್ನು 1862 ರಲ್ಲಿ ಸ್ಕಾಂಟ್ಲೆಂಡಿನ ಭೌತವಿಜ್ಞಾನಿ ಲಾರ್ಡ್ ಕೆಲ್ವಿನ್ ಮತ್ತು ಆಂಗ್ಲ ಭೌತವಿಜ್ಞಾನಿ ಜೇಮ್ಸ್ ಪ್ರೆಸ್ ಕಾಟ್ ಜೌಲ್ ಕಂಡುಹಿಡಿದಿದ್ದರು. ಅನಿಲಗಳು ತಾವಾಗಿ ವಿಸ್ತರಿಸಿದಾಗ ಹೀಗೆ ಆಗಲು ಕಾರಣವೇನು? ಅಣುಗಳ ನಡುವೆ ಆಕರ್ಷಣೆ ಇರುತ್ತದೆ. ವಿಸ್ತರಣಗೊಳ್ಳುವಾಗ ಆಕರ್ಷಣೆಯನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಅಣುಗಳು ಸ್ವಲ್ಪ ಚೈತನ್ಯವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಶಾಖರೂಪದ ಚೈತನ್ಯ ಕಡಿಮೆಯಾಗಿ ತಣ್ಣಗಾಗುತ್ತದೆ. ಉಷ್ಣತೆ ಕಡಿಮೆ ಆಗುತ್ತಾ ಹೋದಂತೆ ಅನಿಲ ದ್ರವೀಕರಿಸುತ್ತದೆ. ಆದರೆ ಆದರ್ಶ ಅನಿಲವೆಂದು ತಿಳಿಯಲ್ಪಟ್ಟ ಹೀಲಿಯಂನ್ನು ಹೀಗೆ ದ್ರವೀಕರಿಸಲು ಸಾಧ್ಯವಾಗಿರಲಿಲ್ಲ. ಕಮರ್ ಲಿಂಗ್  ಹೀಲಿಯಂನ್ನು ದ್ರವೀಕರಿಸಲು ಪ್ರಯತ್ನಿಸಿದ. ಅವನ ಪ್ರಯತ್ನಗಳು ಹತ್ತು ವರ್ಷಕ್ಕೂ ಮಿಕ್ಕಿ ನಡೆದವು. ಕೊನೆಗೆ ಆತ 1908ರಲ್ಲಿ ಯಶಸ್ವಿಯಾದ.

ಹೀಲಿಯಂನ್ನು ದ್ರವೀಕರಿಸಬೇಕಾದರೆ ಅದನ್ನು -256°ಸೆ. ಉಷ್ಣತೆಗೆ ತಣಿಸುವುದು ಅವಶ್ಯವಾಗಿತ್ತು.-250°ಸೆ.ಉಷ್ಣತೆಯಲ್ಲಿರುವ ದ್ರವ ಜಲಜನಕದ ಮೂಲಕ ಹಾಯುವ ಕೊಳವೆಯಲ್ಲಿ ಹೀಲಿಯಂ ಅನಿಲ ಹಾದು ಬಂದು ಚೂಪು ತುದಿಯಲ್ಲಿ ವಿಸ್ತರಣ ಹೊಂದುವಂತೆ ಮಾಡಿದಾಗ ಅದರ ಉಷ್ಣತೆ ಕುಗ್ಗಿ ಹೀಲಿಯಂ ದ್ರವೀಕರಿಸಲ್ಪಟ್ಟಿತು. ಆಗ ಅದರ ಉಷ್ಣತೆ-268.8°ಸೆ ಆಗಿತ್ತು. ಇಷ್ಟು ಕೆಳಗಿನ ಉಷ್ಣತೆಯಲ್ಲಿರುವ ಹೀಲಿಯಂ ದ್ರವವನ್ನು ಆವಿಯಾಗಲು ಬಿಟ್ಟರೆ, ಆವಿಯಾಗುಳಿದ ದ್ರವ ಮತ್ತಷ್ಟು ತಣ್ಣಗಾಗಿತ್ತು. 1910ರಲ್ಲಿ ಹೀಗೆ ಆತ ಸಾಧಿಸಿದ ಉಷ್ಣತೆ 0.8°ನಿ. ಆಗಿತ್ತು.

ದ್ರವ ಹೀಲಿಯಂ ಉಷ್ಣತೆಯಲ್ಲಿ ಇರಿಸಿದ ಸೀಸ, ಪಾದರಸ ಮುಂತಾದ ಕೆಲವು ಲೋಹಗಳು ವಿದ್ಯುತ್ ನಿರೋಧವನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತವೆ ಎಂದು 1911 ರಲ್ಲಿ ಕಮರ್ ಲಿಂಗ್ ಓನೆಸ್ ಕಂಡುಹಿಡಿದ. ಅತಿ ಕಡಿಮೆ ಉಷ್ಣತೆಯಲ್ಲಿ ತೋರುವ ಈ ಗುಣ ಅತಿವಾಹಕತೆ ಎನಿಸಿಕೊಂಡಿತು. ಅತಿ ವಾಹಕತೆಯನ್ನು ಹೊಂದಿರುವ ಇಂಥ ವಸ್ತುಗಳನ್ನು ತೀವ್ರವಾದ ಕಾಂತ ಕ್ಷೇತ್ರಕ್ಕೆ ಒಳಪಡಿಸಿದರೆ ಅತಿ ಕಡಿಮೆ ಉಷ್ಣತೆಯಲ್ಲಿದ್ದರೂ ಅತಿ ವಾಹಕತೆ ಮಾಯವಾಗುತ್ತದೆ ಎಂಬುದನ್ನು ಆತ ಪತ್ತೆ ಹೆಚ್ಚಿದ. ದ್ರವೀಕರಿಸಿದ ಹೀಲಿಯಂನ್ನು ಘನೀಕರಿಸಬೇಕೆಂದು ಕಮರ್ ಲಿಂಗ್ ನ ಪ್ರಯತ್ನವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 1926 ಫೆಬ್ರವರಿ 21ರಂದು ಆತ ಮೃತಪಟ್ಟ.

ಕಮರ್ ಲಿಂಗ್  ತೀರಿಕೊಂಡ ಹಲವು ತಿಂಗಳು ಕಳೆಯುವುದರಲ್ಲಿ ಆತನ ಸಹೋದ್ಯೋಗಿ ಕೀಸಮ್  ಎಂಬಾತ ಹೀಲಿಯಂನ್ನು ಘನೀಕರಿಸುವಲ್ಲಿ ಯಶಸ್ವಿಯಾದ. ದ್ರವ ಹೀಲಿಯಂನ ಉಷ್ಣತೆಗೆ ತಣಿಸಿ ವಾತಾವರಣ ಒತ್ತಡದ 130ರಷ್ಟು ಒತ್ತಡವನ್ನು ಹೇರುವುದರ ಮೂಲಕ ಘನೀಕರಣ ಸಾಧ್ಯವಾಯಿತು.

ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ:9739758558