ಸುದ್ದಿಕಿರಣ ವರದಿ
ಭಾನುವಾರ, ಜುಲೈ 17
ಗುರುಪೂರ್ಣಿಮಾ ಮಹೋತ್ಸವ ಸಂಪನ್ನ
ಉಡುಪಿ: ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವರೇ ಗುರು ಎಂದು ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ರಾಜಶೇಖರ ಹೆಬ್ಬಾರ್ ಹೇಳಿದರು.
ಸನಾತನ ಸಂಸ್ಥೆಯ ವತಿಯಿಂದ ಇಲ್ಲಿನ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ಆಯೋಜಿಸಿದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡಿದರು.
ಹಿಂದೂ ಜನಜಾಗೃತಿ ಸಮಿತಿ ದ.ಕ. ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ, ನಮ್ಮ ಇತಿಹಾಸದಲ್ಲಿ ಧರ್ಮದ ಮೇಲೆ ಆಘಾತವಾದಾಗಲೆಲ್ಲಾ ಈ ಗುರುಶಿಷ್ಯ ಪರಂಪರೆ ದುಷ್ಟರ ದಮನ ಮಾಡಿ ಧರ್ಮ ಸಂಸ್ಥಾಪನೆಯನ್ನು ಮಾಡಿದೆ ಎಂದರು.
ಸನಾತನ ಸಂಸ್ಥೆಯ ದೇವೇಂದ್ರ ಪ್ರಭು ಅವರು ಗುರು ಡಾ. ಆಠವಲೆಯವರ ಸಂದೇಶ ವಾಚಿಸಿದರು.
ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರದ ಪೂಜೆ, ಸನಾತನ ಸಂಸ್ಥೆ ಸಂಸ್ಥಾಪಕ ಗುರು ಡಾ. ಜಯಂತ ಬಾಲಾಜಿ ಅಠವಲೆ ಸಂದೇಶ ವಾಚನ ಮಾಡಲಾಯಿತು.
ಆಧ್ಯಾತ್ಮ ಹಾಗೂ ರಾಷ್ಟ್ರ ಧರ್ಮಕ್ಕೆ ಸಂಬಂಧಿಸಿದ ನಾನಾ ಅಮೂಲ್ಯ ಗ್ರಂಥಗಳ ಪ್ರದರ್ಶನ, ಹಿಂದುತ್ವ ನಿಷ್ಠರಿಗೆ ಗುರುಗಳು ಮಾಡಿದ ಮಾರ್ಗದರ್ಶನ ಮತ್ತು ಮುಂಬರುವ ಆಪತ್ಕಾಲದ ಬಗ್ಗೆ ಧ್ವನಿ ಚಿತ್ರ ಮುದ್ರಿಕೆ ಪ್ರದರ್ಶಿಸಲಾಯಿತು.
ಸನಾತನ ಸಂಸ್ಥೆ ವತಿಯಿಂದ ದೇಶಾದ್ಯಂತ 154 ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯಿತು