Monday, August 15, 2022
Home ಅಧ್ಯಾತ್ಮ ಗುರುಪೂರ್ಣಿಮೆ ಮಹತ್ವ

ಗುರುಪೂರ್ಣಿಮೆ ಮಹತ್ವ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12

ಗುರುಪೂರ್ಣಿಮೆ ಮಹತ್ವ

ಜುಲೈ 13 ಗುರುಪೂರ್ಣಿಮೆ. ಆ ನಿಮಿತ್ತ ಸನಾತನ ಸಂಸ್ಥೆಯ ರಾಜ್ಯ ವಕ್ತಾರ ವಿನೋದ ಕಾಮತ್ ಈ ದಿನದ ವಿಶೇಷತೆಯನ್ನು ತಿಳಿಸಿದ್ದಾರೆ.

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳು. ಇಂಥ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ.

ತಿಥಿ
ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. (ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ)

ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಣೆಯ ಹಿಂದಿನ ಉದ್ದೇಶ.

ಮಹತ್ವ
ಗುರುಪೂರ್ಣಿಮೆಯಂದು ಗುರುತತ್ವ (ಈಶ್ವರೀ ತತತ್ವ) ಇತರ ದಿನಗಳ ತುಲನೆಯಲ್ಲಿ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗಗಳ ಲಾಭ ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ಒಂದು ಸಾವಿರ ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಗುರುಪೂರ್ಣಿಮೆ ಈಶ್ವರೀ ಕೃಪೆಗೆ ಅಮೂಲ್ಯ ಪರ್ವಕಾಲ.

ಗುರು- ಶಿಷ್ಯ ಪರಂಪರೆ ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿ. ಆದರೆ, ಕಾಲದ ಪ್ರವಾಹದಲ್ಲಿ ರಜ ತಮ ಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಗುರು ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ.

ಸ್ವಲ್ಪದರಲ್ಲಿ ಹೇಳುವುದಾದರೆ ಗುರು ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.

ಉತ್ಸವ ಆಚರಿಸುವ ಪದ್ಧತಿ
ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಎಲ್ಲ ಗುರುಗಳ ಶಿಷ್ಯರು ಈ ದಿನದಂದು ಗುರುಗಳ ಪಾದಪೂಜೆ ಮಾಡಿ ಅವರಿಗೆ ಗುರುದಕ್ಷಿಣೆ ಅರ್ಪಿಸುತ್ತಾರೆ. ಈ ದಿನ ವ್ಯಾಸಪೂಜೆ ಮಾಡುವ ಪದ್ಧತಿಯೂ ಇದೆ. ಗುರುಪರಂಪರೆಯಲ್ಲಿ ವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಎಲ್ಲ ಜ್ಞಾನದ ಉಗಮ ವ್ಯಾಸರಿಂದಲೇ ಆಗಿದೆ ಎನ್ನುವುದು ಭಾರತೀಯರ ನಂಬಿಕೆ.

ಶೃಂಗೇರಿ, ದಕ್ಷಿಣ ಭಾರತದಲ್ಲಿನ ಶಂಕರಾಚಾರ್ಯರ ಪ್ರಸಿದ್ಧ ಪೀಠ. ಇಲ್ಲಿ ವ್ಯಾಸಪೂಜಾ ಮಹೋತ್ಸವ ನಡೆಯುತ್ತದೆ. ವ್ಯಾಸ ಮಹರ್ಷಿಗಳು ಮತ್ತೊಮ್ಮೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರು ಎನ್ನುವುದು ಭಕ್ತರ ಶ್ರದ್ಧೆ. ಆದ್ದರಿಂದ ಈ ದಿನ ಸನ್ಯಾಸಿಗಳು ವ್ಯಾಸಪೂಜೆಯಾಗಿ ಶ್ರೀ ಶ್ರೀ ಶಂಕರಾಚಾರ್ಯರ ಪೂಜೆ ಮಾಡುತ್ತಾರೆ.

ಗುರುಪೂಜೆಯ ವಿಧಿ
ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಗುರುಪರಂಪರಾ ಸಿದ್ಧ್ಯರ್ಥಂ ವ್ಯಾಸಪೂಜಾಂ ಕರಿಷ್ಯೇ| ಎಂದು ಸಂಕಲ್ಪ ಮಾಡುತ್ತಾರೆ. ಒಂದು ಶುಭ್ರವಸ್ತ್ರ ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆ ಎಳೆಯುತ್ತಾರೆ. ಇದೇ ವ್ಯಾಸಪೀಠ.

ಅನಂತರ ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ ಮತ್ತು ಶಂಕರಾಚಾರ್ಯರನ್ನು ಈ ವ್ಯಾಸಪೀಠದ ಮೇಲೆ ಆವಾಹನೆ ಮಾಡಿ ಅವರಿಗೆ ಷೋಡಶೋಪಚಾರ ಪೂಜೆ ಮಾಡುತ್ತಾರೆ.

ಈ ದಿನ, ದೀಕ್ಷಾಗುರು ಹಾಗೂ ತಂದೆ ತಾಯಿಯರ ಪೂಜೆಯನ್ನೂ ಮಾಡುವ ಪದ್ಧತಿಯೂ ಇದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!