Thursday, July 7, 2022
Home ಅಧ್ಯಾತ್ಮ ಜಿಲ್ಲೆಯಲ್ಲಿ ಸರಳ ಈಸ್ಟರ್ ವಿಜಿಲ್ ಆಚರಣೆ

ಜಿಲ್ಲೆಯಲ್ಲಿ ಸರಳ ಈಸ್ಟರ್ ವಿಜಿಲ್ ಆಚರಣೆ

ಉಡುಪಿ: ಏಸುಕ್ರಿಸ್ತ ಶಿಲುಬೆಗೇರಿದ ಮೂರನೇ ದಿನ ಪುನರುತ್ಥಾನಗೊಂಡ ಈಸ್ಟರ್ ಹಬ್ಬ (ಪಾಸ್ಕ ಜಾಗರಣೆ)ವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಶನಿವಾರ ರಾತ್ರಿ ಆಚರಿಸಿದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಕಾರ್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ನಡೆಯಿತು. ಚರ್ಚಿನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಕೆನ್ಯೂಟ್, ಪಿಲಾರ್ ಸಭೆಯ ವಂ| ಬ್ರಾಯನ್ ಇದ್ದರು.

ಈ ಸಂದರ್ಭದಲ್ಲಿ ಸಂದೇಶ ನೀಡಿದ ಬಿಷಪ್, ಕಳೆದೊಂದು ವರ್ಷದಿಂದ ಜನತೆ ಕೊರೊನಾಕ್ಕೆ ತುತ್ತಾಗಿ, ಹೊಸ ಭರವಸೆಗಾಗಿ ಕಾಯುತ್ತಿದ್ದರು. ನಾವಿನ್ನೂ ಈ ಅಪಾಯದಿಂದ ಹೊರಬಂದಿಲ್ಲ. ಆದರೂ ಏಸುಸ್ವಾಮಿಯ ಮರಣ ಹಾಗೂ ಪುನರುತ್ಥಾನ ಆಚರಣೆ ನಮಗೆ ಭರವಸೆಯ ಆಶಾಕಿರಣವಾಗಿ ಮೂಡಿದೆ. ಪ್ರಳಯದ ನಂತರ ಶಾಂತತೆ ಮರಳುವಂತೆ ಹೊಸ ಜೀವನ, ಆರೋಗ್ಯ ಹಾಗೂ ನವ ಭವಿಷ್ಯಕ್ಕಾಗಿ ಕಾದಿರುವ ಜನರಿಗೆ ಪುನರುತ್ಥಾನಿ ಏಸುಕ್ರಿಸ್ತ ಶಾಂತಿ ಸಮಾಧಾನ ನೀಡುವ ವಿಶ್ವಾಸ ಇದೆ ಎಂದರು.

ಕ್ರೈಸ್ತ ಬಾಂಧವರು ಹೊಸ ಬಟ್ಟೆ ತೊಟ್ಟು ನಗರದ ಚರ್ಚುಗಳಲ್ಲಿ ನಡೆದ ಈಸ್ಟರ್ ವಿಜಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಾಸ್ಕ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಚರ್ಚುಗಳಲ್ಲಿ ಧರ್ಮಗುರುಗಳು ಹೊಸ ಅಗ್ನಿ ಆಶೀರ್ವದಿಸುವ ಮೂಲಕ ಆರಂಭಗೊಂಡವು. ಆಶೀರ್ವದಿಸಿದ ಹೊಸ ಅಗ್ನಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಬೆಳಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚಿನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಹಳೆ ಒಡಬಂಡಿಕೆಯ ದೇವರ ವಾಕ್ಯವನ್ನು ಪಠಿಸಿದ ಬಳಿಕ ಧರ್ಮಗುರು, ಹೊಸ ನೀರಿನ ಆಶೀರ್ವಚನ ನಡೆಸಿ, ಭಕ್ತಾದಿಗಳಿಗೆ ಪ್ರೋಕ್ಷಣೆ ಮಾಡಿದರು.

ಬಳಿಕ ನಡೆದ ಬಲಿಪೂಜೆಯಲ್ಲಿ ಏಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!