Monday, August 15, 2022
Home ಅಧ್ಯಾತ್ಮ ಜೀವಂತ ಹಾವಿಗೆ ಪೂಜೆ

ಜೀವಂತ ಹಾವಿಗೆ ಪೂಜೆ

ಸುದ್ದಿಕಿರಣ ವರದಿ
ಮಂಗಳವಾರ, ಆಗಸ್ಟ್ 2

ಜೀವಂತ ಹಾವಿಗೆ ಪೂಜೆ
ಕಾಪು: `ಕಲ್ಲ ನಾಗನ ಕಂಡರೆ ಹಾಲೆರೆ ಎಂಬರು, ದಿಟದ ಹಾವನು ಕಂಡರೆ ಕೊಲ್ಲೆಂಬರು…’ ಎಂಬ ಮಾತಿಗೆ ಪ್ರತಿಯಾಗಿ ದಿಟದ ಹಾವಿಗೇ ಹಾಲೆರೆದು ನಾಗರ ಪಂಚಮಿಯಂದು ಪೂಜಿಸುವ ಕ್ರಮ ಇಲ್ಲಿಗೆ ಸಮೀಪದ ಮಜೂರು ಎಂಬಲ್ಲಿ ಕಳೆದ ಸುಮಾರು 20 ವರ್ಷದಿಂದ ನಡೆದುಕೊಂಡು ಬರುತ್ತಿದೆ.

ಮಂಗಳವಾರವೂ ಜೀವಂತ ಹಾವಿಗೆ ತನು ಎರೆದು ಪೂಜಿಸಲಾಯಿತು.

ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಹಾಗೂ ಕ್ಯಾಟರಿಂಗ್ ವೃತ್ತಿಯನ್ನೂ ಮಾಡುತ್ತಿರುವ ಮಜೂರು ನಿವಾಸಿ ಗೋವರ್ಧನ ಭಟ್ ಜೀವಂತ ನಾಗನಿಗೆ ಹಾಲೆರೆದು ಪೂಜಿಸುವ ವ್ಯಕ್ತಿ.

ಉರಗ ಪ್ರೇಮಿಯೂ ಆಗಿರುವ ಅವರು ವಿವಿಧ ಕಾರಣಗಳಿಂದಾಗಿ ಶುಶ್ರೂಷೆ ಬಯಸುವ ನಾಗರಹಾವುಗಳನ್ನು ತನ್ನ ಮನೆಗೆ ತಂದು ಆರೈಕೆ ಮಾಡುತ್ತಾರೆ. ಹಾಗೆ ಶುಶ್ರೂಷೆ ಪಡೆಯುತ್ತಿರುವ ನಾಗರ ಹಾವಿಗೆ ಜಲಾಭಿಷೇಕ, ಕ್ಷೀರಾಭಿಷೇಕ ನಡೆಸಿ, ಅರಶಿನ ಎರಚಿ ಅರ್ಚಿಸಿದರು. ಶುಶ್ರೂಷೆ ನೀಡಿ ಗುಣಮುಖವಾದ ಹಾವುಗಳನ್ನು ಮತ್ತೆ ಕಾಡಿಗೆ ಬಿಡುವುದು ಅವರ ಕಾಯಕ.

ಗಾಯಗೊಂಡಿರುವ ಹಾವುಗಳ ಬಗ್ಗೆ ಯಾರೇ ಕರೆದರೂ ಯಾವುದೇ ಫಲಾಪೇಕ್ಷೆ ಇಲ್ಲದೆ ಗೋವರ್ಧನ ಭಟ್ ಕೂಡಲೇ ಧಾವಿಸುತ್ತಾರೆ. ಹಾವುಗಳನ್ನು ತಂದು ಆರೈಕೆ ಮಾಡುತ್ತಾರೆ. ಹಾಗಾಗಿ ಅವರನ್ನು `ನಾಗರ ಹಾವಿನ ಡಾಕ್ಟರ್’ ಎಂದೂ ಮಂದಿ ಕರೆಯುತ್ತಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!