Monday, August 15, 2022
Home ಅಧ್ಯಾತ್ಮ ಪ್ರಥಮೈಕಾದಶಿ ಮಹತ್ವ

ಪ್ರಥಮೈಕಾದಶಿ ಮಹತ್ವ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಪ್ರಥಮೈಕಾದಶಿ ಮಹತ್ವ

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಉತ್ತಮ ಕೆಲಸ ಪ್ರಾರಂಭಿಸಲು ದಶಮಿ ಮತ್ತು ಏಕಾದಶಿಗಾಗಿ ಜನ ಕಾಯುವುದು ಹೆಚ್ಚು. ಪ್ರತೀ ವರ್ಷದ 24 ಏಕಾದಶಿಗಳಲ್ಲಿ ಆಷಾಢ ಶುಕ್ಲ ಏಕಾದಶಿಯನ್ನು ಮೊದಲ ಏಕಾದಶಿ ಎಂದು ಪರಿಗಣಿಸಲಾಗುತ್ತದೆ. ವರ್ಷದ ಮೊದಲ ಏಕಾದಶಿ ಪ್ರಶಸ್ತ ದಿನ.

ಆಷಾಢ ಏಕಾದಶಿ ಮಹತ್ವ
ಇದನ್ನು ಶಯನ ಏಕಾದಶಿ, ಪ್ರಧಾನ ಏಕಾದಶಿ, ಹರಿವಾಸರಂ‘ ಎಂದೂ ಕರೆಯಲಾಗುತ್ತದೆ.

ಇಂದಿನಿಂದ ಶ್ರೀ ಮಹಾವಿಷ್ಣು ನಾಲ್ಕು ತಿಂಗಳ ಕಾಲ ಕ್ಷೀರಾಬ್ಧಿಯಲ್ಲಿ ಮಲಗುತ್ತಾನೆ. ಹಾಗಾಗಿಯೇ ಇದನ್ನು ಶಯನ ಏಕಾದಶಿ ಅಥವಾ ಹರಿ ಶಯನೀ ಏಕಾದಶಿ ಎಂದು ಕರೆಯುತ್ತಾರೆ.

ಉತ್ತರಾಭಿಮುಖವಾಗಿರುವ ಸೂರ್ಯ ಇಂದಿನಿಂದ ದಕ್ಷಿಣದ ಕಡೆಗೆ ವಾಲುವುದನ್ನು ಕಾಣಬಹುದು. ಸೂರ್ಯ ದಕ್ಷಿಣದ ಕಡೆಗೆ ತಿರುಗುತ್ತಿದ್ದಂತೆ, ದಕ್ಷಿಣಾಯನದ ಆರಂಭವನ್ನು ಸೂಚಿಸುತ್ತದೆ. ಮೇಲಾಗಿ ಚಾತುರ್ಮಾಸ್ಯ ವ್ರತವೂ ಆರಂಭವಾಗಲಿದೆ. ಈ ದಿನ ಗೋಪದ್ಮ ವ್ರತ ಆಚರಿಸಲಾಗುತ್ತದೆ. ಈ ದಿನದಿಂದ ಪ್ರಾರಂಭಿಸಿ ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಾದಶಿ, ಅಂದರೆ ಕ್ಷೀರಾಬ್ಧಿ ದ್ವಾದಶಿ ವರೆಗೆ ಈ ವ್ರತವನ್ನು ಆಚರಿಸಬೇಕು ಎಂದು ಪುರಾಣಗಳು ಹೇಳುತ್ತವೆ.

ಆಷಾಢ ಮಾಸದಲ್ಲಿ ಬರುವ ಏಕಾದಶಿಯ ಮೊದಲ ದಿನ ನಿತ್ಯ ಕರ್ಮಗಳನ್ನು ಮುಗಿಸಿ ಶೇಷಶಯನ ಶ್ರೀ ಲಕ್ಷ್ಮೀನಾರಾಯಣನನ್ನು ಸ್ತುತಿಸಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.

ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು, ವಿಷ್ಣುವು ಹಾಲಿನ ಕಡಲಲ್ಲಿ ಯೋಗ ನಿದ್ರಾ ಪ್ರವೇಶಿಸುವ ಸಂದರ್ಭ. ಈ ಶಯನ ಏಕಾದಶಿಯಂದೇ ಸತಿ ಸಖೂಬಾಯಿ ಮೋಕ್ಷ ಪಡೆದರು ಎನ್ನಲಾಗಿದೆ.

ಇಂದು ದಿನವಿಡೀ ಉಪವಾಸವಿದ್ದು ರಾತ್ರಿ ಜಾಗರಣೆ ಮಾಡಿ, ದ್ವಾದಶಿಯಂದು ಬೆಳಗ್ಗೆ ವಿಷ್ಣುವನ್ನು ಪೂಜಿಸಿ, ತೀರ್ಥಪ್ರಸಾದ ಸ್ವೀಕರಿಸಿ ನಂತರ ಊಟ ಮಾಡಿದರೆ ಜನ್ಮ ಜನ್ಮಾಂತರಗಳ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಇಂದು ಯೋಗನಿದ್ರೆಗೆ ಪ್ರವೇಶಿಸುವ ಭಗವಾನ್ ಮಹಾವಿಷ್ಣು ನಾಲ್ಕು ತಿಂಗಳ ನಂತರ ಕಾರ್ತೀಕ ಶುದ್ಧ ಏಕಾದಶಿಯಂದು ಮತ್ತೆ ಎಚ್ಚರಗೊಳ್ಳುತ್ತಾನೆ. ಅದನ್ನು ಉತ್ಥಾನ ಏಕಾದಶಿ ಎನ್ನುತ್ತಾರೆ. ಅದರ ಮರುದಿನವನ್ನು ಕ್ಷೀರಾಬ್ಧಿ ದ್ವಾದಶಿ ಎಂದು ಕರೆಯಲಾಗುತ್ತದೆ. ಈ ನಾಲ್ಕು ತಿಂಗಳನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇಂದಿನಿಂದ ಕೆಲವರು ಚಾತುರ್ಮಾಸ ದೀಕ್ಷೆಯನ್ನೂ ಮಾಡುತ್ತಾರೆ.

ಈ ಏಕಾದಶಿಯ ವಿಶಿಷ್ಟತೆಯನ್ನು ಪದ್ಮ ಪುರಾಣದಲ್ಲಿ ವಿವರಿಸಲಾಗಿದೆ.

ಅಷ್ಟ ಕಷ್ಟಗಳಿಂದ ನರಳುತ್ತಿರುವ ಮನುಕುಲವನ್ನು ಉದ್ಧಾರ ಮಾಡಲು ಸಾಕ್ಷಾತ್ ಶ್ರೀ ಹರನೇ ಈ ಏಕಾದಶಿ ವ್ರತ ಮಾಡಿದ್ದಾನೆ. ಈ ವ್ರತವನ್ನು ಶ್ರದ್ಧೆಯಿಂದ ಆಚರಿಸುವವರು ಸಕಲ ಸಂಕಟಗಳಿಂದ ಮುಕ್ತಿ ಹೊಂದಿ ಮರಣಾನಂತರ ವೈಕುಂಠವನ್ನು ಹೊಂದುತ್ತಾರೆ ಎಂದು ಪದ್ಮ ಪುರಾಣ ಹೇಳುತ್ತದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!