Wednesday, July 6, 2022
Home ಅಧ್ಯಾತ್ಮ ಸಂಭ್ರಮದ ಈಸ್ಟರ್‌ ಜಾಗರಣೆ

ಸಂಭ್ರಮದ ಈಸ್ಟರ್‌ ಜಾಗರಣೆ

ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 16

ಸಂಭ್ರಮದ ಈಸ್ಟರ್ ಜಾಗರಣೆ
ಉಡುಪಿ: ಏಸುಕ್ರಿಸ್ತ ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ಬೈಬಲ್ ನ ನಂಬಿಕೆಯಂತೆ ಏಸುಕ್ರಿಸ್ತ ಶಿಲುಬೆಗೇರಿದ ಮೂರನೇ ದಿನ ಅಂದರೆ ಈಸ್ಟರ್ ಸಂಡೆಯಂದು ಪುನರುತ್ಥಾನರಾದರು ಎಂಬ ವಿಶ್ವಾಸದೊಂದಿಗೆ ವಿಶ್ವದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ಈಸ್ಟರ್ ಜಾಗರಣೆ ಬಲಿಪೂಜೆಗಳು ಜರುಗಿದವು. ಕ್ರೈಸ್ತ ಬಾಂಧವರು ಹೊಸ ಬಟ್ಟೆ ತೊಟ್ಟು ನಗರದ ಚರ್ಚುಗಳಲ್ಲಿ ನಡೆದ ಈಸ್ಟರ್ ವಿಜಿಲ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಡುಪಿ ಬಿಷಪ್ ವಂ. ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರಧಾನ ಕಾರ್ಯಕ್ರಮ ಶನಿವಾರ ರಾತ್ರಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ್) ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ಪಿಲಾರ್ ಸಭೆಯ ಧರ್ಮಗುರು ವಂ| ನಿತೇಶ್ ಡಿ’ಸೋಜಾ ಇದ್ದರು.

ಜಿಲ್ಲೆಯ ಪ್ರಮುಖ ಚರ್ಚುಗಳಾದ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ| ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ| ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ| ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ| ಆಲ್ಬನ್ ಡಿ’ಸೋಜಾ ನೇತೃತ್ವದಲ್ಲಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ್) ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಬಲಿಪೂಜೆಗೆ ಮುನ್ನ ಏಸು ಸಾವೆಂಬ ಕತ್ತಲೆಯಿಂದ ಹೊರಬಂದ ಧ್ಯೋತಕವಾಗಿ ಹೊಸ ಅಗ್ನಿಯ ಆಶೀರ್ವಚನವನ್ನು ಧರ್ಮಗುರುಗಳು ನೇರವೇರಿಸಿ ಈಸ್ಟರ್ ಹಬ್ಬದ ಕ್ಯಾಂಡಲನ್ನು ಉರಿಸಿ ಪ್ರಾರ್ಥನಾ ವಿಧಿಗಳಿಗೆ ಚಾಲನೆ ನೀಡಿದರು. ಆಶೀರ್ವದಿಸಿದ ಹೊಸ ಅಗ್ನಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲನ್ನು ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚ್ ನಲ್ಲಿ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಹಳೆ ಒಡಬಂಡಿಕೆಯ ದೇವರ ವಾಕ್ಯವನ್ನು ಪಠಿಸಿದ ಬಳಿಕ ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನಡೆಸಿ, ಭಕ್ತಾದಿಗಳ ಮೇಲೆ ಹೊಸ ಜಲ ಪ್ರೋಕ್ಷಿಸಿದರು. ಬಳಿಕ ನಡೆದ ಬಲಿಪೂಜೆಯಲ್ಲಿ ಏಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಧರ್ಮಗುರುಗಳು ಭಕ್ತಾದಿಗಳಿಗೆ ವಿವರಿಸಿದರು.

ಈ ವೇಳೆ ಈಸ್ಟರ್ ಸಂದೇಶ ನೀಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಜೆರಾಲ್ಡ್ ಲೋಬೊ, ಏಸುವಿನ ಪುನರುತ್ಥಾನ ಪ್ರಸ್ತುತ ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಅಸೂಯೆ, ಕ್ರೋಧ ಹಾಗೂ ತಾರತಮ್ಯತೆಯ ಕೆಡುಕುಗಳು ನಮ್ಮಿಂದ ದೂರವಾಗಿ, ಸಕಲ ಧರ್ಮಗಳ ಜನರು ಸಹೋದರ- ಸಹೋದರಿಯರಾಗಿ ಜೀವಿಸಲು ಸಹಕಾರಿಯಾಗಲಿ. ಶಿಲುಬೆಯ ಮೇಲೆ ಮೃತಪಟ್ಟ ಏಸುಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣ ಅವರನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ವಿರುದ್ಧ ದಿಗ್ವಿಜಯ ಸಾಧಿಸಿದರು. ಆ ಮೂಲಕ ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ. ಕ್ಷಣಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ ಎಂದರು.

ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 45 ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಏಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಏಸುವಿನ ಪುನರುತ್ಥಾನಗೊಳ್ಳುವ ಮೂಲಕ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಕೂಡ ಕ್ರಿಸ್ ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!