Tuesday, May 17, 2022
Home ಅಧ್ಯಾತ್ಮ ಫಿನಿಕ್ಸ್ ಪುತ್ತಿಗೆ ಮಠದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

ಫಿನಿಕ್ಸ್ ಪುತ್ತಿಗೆ ಮಠದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 16

ಫಿನಿಕ್ಸ್ ಪುತ್ತಿಗೆ ಮಠದಲ್ಲಿ ಶತ ಚಂಡಿಕಾ ಯಾಗ ಸಂಪನ್ನ
ಫಿನಿಕ್ಸ್: ಲೋಕ ಕಲ್ಯಾಣಾರ್ಥವಾಗಿ ಅಮೆರಿಕಾದ ಫಿನಿಕ್ಸ್ ನಗರದ ಪುತ್ತಿಗೆ ಮಠದಲ್ಲಿ ಏ. 11ರಂದು ಆರಂಭಗೊಂಡ ಶತ ಚಂಡಿಕಾ ಯಾಗ ಏ. 16 ಶನಿವಾರದಂದು ಪೂರ್ಣಾಹುತಿ ಮೂಲಕ ಸಂಪನ್ನಗೊಂಡಿತು.
ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ನಡೆದ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಸಾಕ್ಷೀಗಳಾಗಿ, ಧನ್ಯರಾದರು.

10 ಮಂದಿ ಋತ್ವಿಜರಿಂದ 100 ಪಾರಾಯಣ, ಒಂದು ಲಕ್ಷ ನವಾಕ್ಷರಿ ಮಂತ್ರ ಜಪ, 10 ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾ ಯಾಗ ನೆರವೇರಿತು. ಶತ ಚಂಡಿಕಾ ಯಾಗಕ್ಕೆ 70 ಕೆಜಿ ಪರಮಾನ್ನ ಬಳಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀನಿವಾಸ ದೇವರು ಹಾಗೂ ಶ್ರೀ ದುರ್ಗೆಗೆ ಕುಂಭಾಭಿಷೇಕ ನಡೆಯಿತು.

ಅರಿಜೋನಾ ಹರಿ ಝೋನ್ ಆಗಲಿ
ಧಾರ್ಮಿಕ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವದಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಲೋಕದಲ್ಲಿ ಇಂದು ಸುಖ, ಶಾಂತಿ ಸಮೃದ್ಧಿಗೆ ವಿಪರೀತ ಬೇಡಿಕೆ ಇದೆ. ಈ ಮೂರೂ ಪ್ರಾಪ್ತವಾಗಬೇಕಾದರೆ ಶ್ರೀದೇವಿಗೆ ಶರಣು ಹೋಗಬೇಕು, ಅರಾಧಿಸಬೇಕು. ಈ ಹಿನ್ನೆಲೆಯಲ್ಲಿ ಲೋಕದಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಫೀನಿಕ್ಸ್ ನಗರದಲ್ಲಿ ಶತ ಚಂಡಿಕಾ ಯಾಗ ಆಯೋಜಿಸಲಾಯಿತು ಎಂದರು.

ಅಮೆರಿಕಾದ ನಾಗರಿಕರಿಗೆ ದೈವ ಭಕ್ತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕೆಯ ಈ ಪ್ರದೇಶ ಅರಿಜೋನಾ ಹರಿ ಝೋನ್ ಆಗಲಿ. ಟೆಂಪೆ, ಟೆಂಪಲ್ ಆಗಲಿ. ಪ್ರೀಸ್ಟ್ ಸ್ಟ್ರೀಟ್ ಪುರೋಹಿತರ ಬೀದಿಯಾಗಲಿ ಎಂದು ಆಶಿಸಿದರು.

ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಪ್ರಧಾನ ಅರ್ಚಕರಾದ ಕಿದಿಯೂರು ರಾಮದಾಸ ಭಟ್, ಶ್ರೀಕಾಂತ ಸಾಮಗ, ರಾಘವೇಂದ್ರ ಕೊಡಂಚ, ಅಮೆರಿಕೆಯ 9 ಮಠಗಳ ಪ್ರಧಾನ ಅರ್ಚಕರು, ಟೆಂಪೆ ನಗರದ ಮೇಯರ್ ಪ್ರತಿನಿಧಿ ಪ್ಯಾರಿಷ್ ಸ್ಪಿಟ್ಜ್, ಫಿನಿಕ್ಸ್ ಪುತ್ತಿಗೆ ಮಠದ ಶ್ರೀ ವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ ರಾವ್, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ ಇದ್ದರು.

ಅಮೆರಿಕೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಉಡುಪಿ ಶೈಲಿಯಲ್ಲಿ ಬಾಳೆಎಲೆಯಲ್ಲಿ ಮಹಾಪ್ರಸಾದ ಸ್ವೀಕರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!