ಸುದ್ದಿಕಿರಣ ವರದಿ
ಮಂಗಳವಾರ, ಆಗಸ್ಟ್ 2
ಸಂಭ್ರಮದ ನಾಗರ ಪಂಚಮಿ ಸಂಪನ್ನ
ಉಡುಪಿ: ಶ್ರಾವಣ ಶುದ್ಧ ಪಂಚಮಿ ಮಂಗಳವಾರ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು.
ಜನತೆ ತಮ್ಮ ಮೂಲ ನಾಗ ಬನಗಳಲ್ಲಿ, ಮನೆ- ಜಾಗಕ್ಕೆ ಸಂಬಂಧಿಸಿದ ನಾಗಬನಗಳಿಗೆ ತೆರಳಿ ನಾಗದೇವರಿಗೆ ಹಾಲು, ಎಳನೀರು ಸಮರ್ಪಿಸಿ ತನು ಎರೆದರು. ತಂಬಿಲ ಸೇವೆ, ಪಂಚಕಜ್ಜಾಯ ಸೇವೆ ಸಮರ್ಪಿಸಿದರು.
ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ, ನಾಗಾಲಯಗಳಲ್ಲಿ, ಸುಬ್ರಹ್ಮಣ್ಯನ ಕ್ಷೇತ್ರಗಳಲ್ಲಿ ಪಂಚಾಮೃತ- ಕ್ಷೀರಾಭಿಷೇಕ, ಎಳನೀರು ಅಭಿಷೇಕ ಇತ್ಯಾದಿ ನಡೆದವು. ನಾಗ ಪ್ರೀತ್ಯರ್ಥ್ಯವಾಗಿ ಕೆಲವರು ಉಪವಾಸ ವ್ರತಾಚರಿಸಿದರು.
ನಾಗ ಸಂಪ್ರೀತಿಯ ಪುಷ್ಪಗಳಾದ ಕೇದಗೆ, ಸಂಪಿಗೆ, ಪಿಂಗಾರ ಇತ್ಯಾದಿಗಳನ್ನು ಸಮರ್ಪಿಸಿದರು. ಅರಶಿನದಿಂದ ಸಿಂಗರಿಸಿದರು.
ಕೃಷ್ಣಮಠ
ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಾಗರಪಂಚಮಿ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀ ವಾದಿರಾಜತೀರ್ಥ ಪ್ರತಿಷ್ಠಾಪಿತ ತಕ್ಷಕ ಸನ್ನಿಧಾನದಲ್ಲಿ ಹಾಗೂ ಅಶ್ವತ್ಥಮರದ ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ಕ್ಷೇತ್ರ ಷಟ್ ಶಿರ ನಾಗ ಸನ್ನಿಧಿಯಲ್ಲಿ ನಾಗ ತನು, ತಂಬಿಲ ಸೇವೆ ಸಲ್ಲಿಸಲಾಯಿತು.
ಕಡೆಕಾರು ಮಠ
ಕಡೆಕಾರು ಶ್ರೀ ಲಕ್ಷ್ಮೀನಾರಾಯಣ ಮಠದ ನಾಗ ಸನ್ನಿಧಿಯಲ್ಲಿ ಮಠದ ವ್ಯವಸ್ಥಾಪಕ ಶ್ರೀಶ ಭಟ್ ಕಡೆಕಾರು ವಿಶೇಷ ಪೂಜೆ ಸಲ್ಲಿಸಿದರು.
ಸರಳೇಬೆಟ್ಟು
ಮಣಿಪಾಲ ಸರಳೇಬೆಟ್ಟು ಕೋಡಿ ಶ್ರೀ ನಾಗ ಬ್ರಹ್ಮಸ್ಥಾನದಲ್ಲಿ ಹೆರ್ಗ ರಾಘವೇಂದ್ರ ತಂತ್ರಿ ನೇತೃತ್ವದಲ್ಲಿ ನಾಗಾರಾಧನೆ ನಡೆಸಲಾಯಿತು.
ತೆಂಕಪೇಟೆ ಎಲ್.ವಿ.ಟಿ
ತೆಂಕಪೇಟೆ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಿಸಲಾಯಿತು.
ಕಿದಿಯೂರು ಹೋಟೆಲ್ಕಿದಿಯೂರು ಹೋಟೆಲ್ ಪ್ರಾಂಗಣದ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪೂಜಾ ಮಹೋತ್ಸವ ಕಬಿಯಾಡಿ ಜಯರಾಮ ಆಚಾರ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳಾದ ಕ್ಷೀರಾಭಿಷೇಕ ಹಾಗೂ ಸೀಯಾಳಾಭಿಷೇಕ, ಮಹಾಪೂಜೆ ನಡೆಯಿತು. ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಹೀರಾ ಬಿ. ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ವಿಲಾಸ ಕುಮಾರ್ ಮೊದಲಾದವರಿದ್ದರು.