ಸುದ್ದಿಕಿರಣ ವರದಿ
ಶುಕ್ರವಾರ, ಮೇ 6
ಪಣಿಯಾಡಿ ಬ್ರಹ್ಮಕಲಶೋತ್ಸವ ಸಂಪನ್ನ
ಉಡುಪಿ: ಇಲ್ಲಿನ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ಬ್ರಹ್ಮಕಲಶಾಭಿಷೇಕ ಸಂಭ್ರಮದಿಂದ ಸಂಪನ್ನಗೊಂಡಿತು.
ಶ್ರೀದೇವಳದ ಆಡಳಿತ ಮೊಕ್ತೇಸರರೂ ಆಗಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಋತ್ವಿಜರೊಡಗೂಡಿ ಕುಂಭಾಭಿಷೇಕ ನೆರವೇರಿಸಿದರು.
ಐತಿಹಾಸಿಕ ಕಾರ್ಯಕ್ರಮ
ಉಡುಪಿಯ ಇತಿಹಾಸ ಪ್ರಸಿದ್ಧ ಮತ್ತು ಮಧ್ವವಿಜಯ ಮಹಾಕಾವ್ಯದಲ್ಲಿ ಉಲ್ಲೇಖಗೊಂಡ ಹಾಗೂ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟಿರುವ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಸಂಕಲ್ಪಿಸಿದ್ದ ಬ್ರಹ್ಮಕಲಶೋತ್ಸವ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವೈದಿಕ ವೃಂದದವರೊಂದಿಗೆ ಸಹಸ್ರ ಕಲಶಾಭಿಷೇಕ ನಡೆಸಿ, ಶುಕ್ರವಾರ ಬೆಳಿಗ್ಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನೆರವೇರಿಸಿದರು.
ಬಹು ವೈಭವದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ತಂತ್ರಿ ವೇ| ಮೂ| ಹಯವದನ ತಂತ್ರಿ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ವಾನ್ ವಾದಿರಾಜ ತಂತ್ರಿ, ವಿದ್ವಾನ್ ಪಂಜ ಭಾಸ್ಕರ ಭಟ್, ವಿದ್ವಾನ್ ಗೋಪಾಲಕೃಷ್ಣ ಜೋಯಿಸ್, ವಿದ್ವಾನ್ ಅವಧಾನಿ ಸುಬ್ರಹ್ಮಣ್ಯ ಭಟ್, ಅರ್ಚಕ ಕೆ.ರಾಘವೇಂದ್ರ ಭಟ್, ಬಿದರಹಳ್ಳಿ ರಘೂತ್ತಮಾಚಾರ್, ವಿದ್ವಾನ್ ಮಧ್ವರಮಣಾಚಾರ್ ಹಾಗೂ ಊರ ಪರ ಊರಿನ ಅಸಂಖ್ಯ ಭಕ್ತರು, ಜೀರ್ಣೋದ್ಧಾರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಇದ್ದರು.
ಪುತ್ತಿಗೆ ಶ್ರೀಪಾದರ ಷಷ್ಠ್ಯಬ್ಧಿಪೂರ್ತಿ ಮಹೋತ್ಸವ ಪ್ರಯುಕ್ತ ಪ್ರಾಚೀನವಾದ ಈ ದೇವಾಲಯವನ್ನು ಅತ್ಯಂತ ಭವ್ಯವಾಗಿ ಜೀರ್ಣೋದ್ಧಾರಗೊಳಿಸಲಾಗಿದೆ.
ಅನ್ನಸಂತರ್ಪಣೆ
ಬಳಿಕ ಪಲ್ಲಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಸಚಿವರ ಭೇಟಿಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಧಾರ್ಮಿಕ ಸಭ,ೆ ದೀಪಾರಾಧನೆ, ರಂಗಪೂಜೆ, ಉತ್ಸವ ಬಲಿ ಇತ್ಯಾದಿಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಗೀತಾ ಬಾಲಚಂದ್ರ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಜೀರ್ಣೋದ್ಧಾರ ಸಮಿತಿಯ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ವಿಜಯ ರಾಘವ ರಾವ್, ವಿಶ್ವನಾಥ ಭಟ್, ಮೊದಲಾದವರಿದ್ದರು.