Saturday, August 13, 2022
Home ಅಧ್ಯಾತ್ಮ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೆಕರ್ 

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೆಕರ್ 

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೆಕರ್ 
ಇಂದು ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೆಕರ್ ಅವರ ಪುಣ್ಯತಿಥಿ.
ಯುವ ಲೇಖಕ ಸಮರ್ಥ ಕಾಂತಾವರ ಅವರು ಶ್ರೀ ಮಹಾರಾಜರನ್ನು ಸುಂದರವಾಗಿ ಪರಿಚಯಿಸಿದ್ದಾರೆ.
ಶ್ರೀ ಮಹಾರಾಜರ ಜನ್ಮ ಶಕೆ ೧೭೬೬ ಮಾಘ ಮಾಸದ ಶುದ್ಧ ದ್ವಾದಶಿಯ ಬುಧವಾರ ನಸುಕಿನ ಸೂರ್ಯೋದಯದ ಸಮಯದಲ್ಲಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಗೋಂದಾವಲೆಯಲ್ಲಿ ಸೌ. ಗೀತಾ ಬಾಯಿ ಮತ್ತು ರಾವಾಜಿ ದಂಪತಿಗಳ ಗರ್ಭದಲ್ಲಿ ಜನಿಸಿದರು. ಹುಟ್ಟಿದಾಗಿನಿಂದಲೂ ಶ್ರೀ ಮಹಾರಾಜರು ಗಟ್ಟಿಮುಟ್ಟಾಗಿದ್ದರು, ಹುಟ್ಟಿದಾಗಲೇ ಅವರು ನಾಲ್ಕು ತಿಂಗಳ ಕೂಸಿನಷ್ಟು ದಷ್ಟಪುಷ್ಟರಾಗಿದ್ದರು. ಮಹಾರಾಜರ ಜನ್ಮನಾಮ ಗಣಪತಿ.
ಶ್ರೀ ಮಹಾರಾಜರ ಪೂರ್ವಜರು
ಮಹಾರಾಜರ ಅಜ್ಜ ಲಿಂಗೋಪಂತರು, ಇವರು ಕುಲಕರ್ಣಿ‌ ವೃತ್ತಿ ಮಾಡುತ್ತಿದ್ದರು ಆದುದರಿಂದ ಜನರು ಇವರಿಗೆ “ಲಿಂಗೋಪಂತ ಇನಾಮದಾರ” ಎಂಬುದಾಗಿ ಕರೆಯುತ್ತಿದ್ದರು. ಇವರು ತಮ್ಮ ಐದು ವರ್ಷದ ಮೊಮ್ಮಗನಿಗೆ ಪರೀಕ್ಷೆ ಮಾಡಬೇಕೆಂದು ಪಂತರ ಮನಸ್ಸಿನಲ್ಲಿ ಬಂದಿತು. ಸಕಲರೂ ಕುಳಿತಾಗ ಅಜ್ಜನು ಶ್ರೀ ಮಹಾರಾಜರನ್ನು ಕೇಳಿದರು “ಗಣೂ, ನಿನಗೆ ಒಂದು ಹಂಡೆ ತುಂಬಾ ಹಣ, ಒಡವೆಗಳನ್ನು ಕೊಟ್ಟರೆ ನೀನು ಏನು ಮಾಡುವಿ?”, ಅದಕ್ಕೆ ಮಹಾರಾಜರು ತಟ್ಟನೆ ಉತ್ತರ ಕೊಟ್ಟರು “ಕುರುಡರು, ಕುಂಟರು, ರೋಗಿಗಳು, ಬಡವರು ಮತ್ತು ಭಿಕ್ಷುಕರು ಮೊದಲಾದವರಿಗೆ ಎಲ್ಲವನ್ನೂ ಹಂಚಿ ಬಿಡುತ್ತೇನೆ”. ಈ ಉತ್ತರ ಕೇಳಿ ಪಂತರ ಕಣ್ಣಲ್ಲಿ ಆನಂದಾಶ್ರುಗಳು ತುಂಬಿ ಬಂದವು.
ಶ್ರೀ ಮಹಾರಾಜರ ಬಾಲ್ಯ
ಶ್ರೀ ಮಹಾರಾಜರಿಗೆ ೬ನೇ ವಯಸ್ಸಿನಲ್ಲಿ ಇರುವಾಗ ಉಪನಯನವಾಯಿತು. ಕುಲ ಪುರೋಹಿತರಾದ ಸಖಾರಾಮ ಭಟ್ಟ ಪಾಠಕ್ ಅವರು ದಿನಂಪ್ರತಿ ಮಹಾರಾಜರಿಗೆ ಬ್ರಹ್ಮ ಕರ್ಮವನ್ನು ಕಲಿಸಲು ಬರುತ್ತಿದ್ದರು. ಎರಡು ಮೂರು ತಿಂಗಳ ಅವಧಿಯಲ್ಲಿ ಸಂಧ್ಯಾ, ಪೂಜಾ, ಪವಮಾನ, ರುದ್ರ ಮೊದಲಾದವುಗಳನ್ನು ಕಲಿತುಬಿಟ್ಟರು.
ಉಪನಯನ ಆದಮೇಲೆ ಶ್ರೀ ಮಹಾರಾಜರ ವ್ಯುತ್ಪತ್ತಿ ಹೆಚ್ಚೆಚ್ಚು ಅಂತರ್ಮುಖವಾಗತೊಡಗಿತು. ಪೌರಾಣಿಕ ಕಥೆಗಳ ಮನನ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸಮಯ ಒಂದು ಹೊಡೆದಾಗ ಮಹಾರಾಜರ ಅಜ್ಜ ಪಂತರಿಗೆ ಎಚ್ಚರವಾಯಿತು, ಪಕ್ಕದ ಹಾಸಿಗೆಯ ಮೇಲೆ ಶ್ರೀ ಮಹಾರಾಜರು ಮಲಗಿರಲಿಲ್ಲ. ಆಗ ಪಂತರು ಎಲ್ಲರನ್ನು ಎಬ್ಬಿಸಿ ಶ್ರೀ ಮಹಾರಾಜರ ಶೋಧ ಮಾಡಿದರು. ಇಡೀ ಊರು ತುಂಬಾ ಹುಡುಕಿದರೂ ಅವರ ಸುಳಿವು ಸಿಗಲ್ಲಿಲ್ಲ. ಕಡೆಗೆ ನರಾಶರಾಗಿ ಕಡೇ ಪ್ರಯತ್ನವೆಂದು ನದಿ ದಂಡೆಯ ಮೇಲಿದ್ದ ಸ್ಮಶಾನದ ಕಡೆಗೆ ಹೋದರು ‌ ಅಲ್ಲಿ ಒಂದು ಸಣ್ಣ ಗುಹೆಯಲ್ಲಿ ಶ್ರೀ ಮಹಾರಾಜರು ಆಸನವನ್ನು ಹಾಕಿ ಕಣ್ಣು ಮುಚ್ಚಿಕೊಂಡು ಧ್ಯಾನಸ್ಥರಾಗಿ ಕುಳಿತ್ತಿದ್ದರು.
ಗುರು ಶೋಧ
ಗೋಂದಾವಲೆ ಗ್ರಾಮದ ಮಾರುತಿ ಮಂದಿರವು ಶ್ರೀ ಮಹಾರಾಜರ ಮನೆಯ ಹತ್ತಿರ ಇತ್ತು. ಬಾವ ಬೈರಾಗಿಗಳು, ಗೋಸಾವಿಗಳು, ಯಾತ್ರಿಕರು ಅಲ್ಲಿಗೆ ಬಂದು ವಸತು ಮಾಡುತ್ತಿದ್ದರು. ಇಂತಹ ಸಾಧು ಸಂತರು ಅಲ್ಲಿ ಬಂದ ಕೊಡಲೇ ಶ್ರೀ ಮಹಾರಾಜರು ಅವರನ್ನು ಭೇಟಿಯಾಗಿ ಭಗವಂತನ ಬಗ್ಗೆ ವಿಚಾರಿಸುತ್ತಿದ್ದರು‌ ಅಲ್ಲಿಗೆ ಬಂದ ಒಬ್ಬ ಸಾಧುವು ಅವರಿಗೆ “ಸದ್ಗುರುವಿನ ಹೊರ್ತು ದೇವರ ದರ್ಶನವಾಗಲಾರದು” ಎಂದು ಹೇಳಿದನು. ಈ ಮಾತನ್ನು ಕೇಳಿ ಅವರು ಗುರುವಿನ ಶೋಧಕ್ಕಾಗಿ ಮನೆ ಬಿಟ್ಟು ಹೊರ ಬಂದರು. ಈ ಸಮಯದಲ್ಲಿ ಅವರಿಗೆ ಬಾಲ ಮಿತ್ರರ ಪೈಕಿ ಅವರ ಕಾಕ್ಕನ ಮಗ ದಾಮೋದರ ಮತ್ತು ವಾಮನ ಈ ಇಬ್ಬರೂ ಶ್ರೀ ಮಹಾರಾಜರ ವಿಶ್ವಾಸದ ಗೆಳೆಯರಾಗಿದ್ದರು‌ ಈ ಮೂರು ಜನ ಹುಡುಗರು ನಸುಕಿನಲ್ಲಿ ೩:೩೦ರ ಸಮಯಕ್ಕೆ ಮನೆಯನ್ನು ಬಿಟ್ಟು ಗುರು ಶೋಧಕ್ಕೆ ಹೊರಟರು. ಆಗ ಶ್ರೀ ಮಹಾರಾಜರ ಮೈ ಮೇಲೆ ಇದ್ದ ವಸ್ತ್ರಗಳೆಂದರೆ ಒಂದು ಲಂಗೋಟಿ ಮತ್ತು ಒಂದು ಅಡ್ಡ ಅಂಗಿ, ಕಿವಿಯಲ್ಲಿ ಒಂದು ಬಾವುಲಿ ಅದನ್ನು ನೋಡಿ ಜನರು ಆಕರ್ಷಿತರಾಗುತ್ತಿದ್ದರು‌ ನಂತರದಲ್ಲಿ ಈ ೯-೧೦ ವರ್ಷದ ಹುಡುಗರು ಗುರುಶೋಧದಲ್ಲಿ ಪಂಢರಪುರ, ಕೊಲ್ಹಾಪುರದ ಅಂಬಾಬಾಯಿ ದೇವರ ದರ್ಶನ ತೆಗೆದುಕೊಂಡು ಮನೆಗೆ ಮರಳಿದರು.
ಮನೆಗೆ ಹಿಂದಿರುಗಿ ಬಂದ ಮೇಲೆಯೂ ಅವರ ವೃತ್ತಿಯಲ್ಲಿ ಬದಲಾವಣೆಯಾಗಿ ರಾತ್ರಿ ಹೆಚ್ಚು ಹೊತ್ತು ಧ್ಯಾನಸಕ್ತರಾಗಿ ಕೂಡುತ್ತ ನಡೆದರು. ಬಾಯಿಯಿಂದ ಸತತ ನಾಮಸ್ಮರಣೆಯು ನಡೆಯುತ್ತಿತ್ತು. ಆಗ ಅವರ ಅಜ್ಜ ಪಂತರ ಮನಸ್ಸಿನಲ್ಲಿ ಇವನಿಗೆ ಲಗ್ನ ಮಾಡಿದರೆ ತನ್ನಷ್ಟಕ್ಕೆ ತಾನೇ ಮನೆಯಲ್ಲಿಯೇ ಉಳಿಯುವನು ಎಂದು ಅನಿಸಿತು
ಗೋಂದಾವಲೆಯಿಂದ ೮-೧೦ ಹರದಾರಿಯಲ್ಲಿ ಖಾತವಳ ಎಂಬ ಗ್ರಾಮವಿದೆ. ಅಲ್ಲಿ ಭಾಗೀರಥಿಬಾಯಿ ಎಂಬ ಕುಟುಂಬದಲ್ಲಿ ಸಾಂಭಾಜಿ ಮಲ್ಹಾರ ಗೊಡಸೆ ಎಂಬ ಹೆಸರಿನ ಕುಲಕರ್ಣಿ ಇದ್ದರು. ಇವರ ಮಗಳ ಜೊತೆ ಶ್ರೀ ಮಹಾರಾಜರ ಲಗ್ನವಾಯಿತು‌. ಈ ಸಮಯದಲ್ಲಿ ಪಂತರು ನವ ದಂಪತಿಗಳ ಜೊತೆ ಪಂಢರಪುರದ ವಾರಿಗೆ ಕರೆದುಕೊಂಡು ಹೋದರು ‌ ಇದು ಪಂತರ ಕಡೆಯ ವಾರಿಯಾಗಿತ್ತು ನಂತರದಲ್ಲಿ ಇವರು ತಮ್ಮ ಇಹಯಾತ್ರೆಯನ್ನು ಮುಗಿಸಿದರು. ಅಜ್ಜ ಮತ್ತು ಅಜ್ಜಿ ಹೊರಟು ಹೋದ ಮೇಲೆ ಅವರ ಮನೆಯು ಅವರ ಅಭಾವದಿಂದ ಭಣಭಣ ಆಯಿತು. ಮಹಾರಾಜರ ತಂದೆ ರಾವಾಜಿ ಕೆಲಸದ ಮಟ್ಟಿಗೆ ಪ್ರಪಂಚವನ್ನು ನೋಡುತ್ತಿದ್ದರು ‌ ಇದರಿಂದ ಮಹಾರಾಜರಿಗೆ ಪೂರ್ಣ ವಿರಾಮವು ಸಿಕ್ಕಿದಂತಾಯಿತು. ಒಂದು ದಿನ ಸಮಯ ಸಾಧಿಸಿ ಪುನಃ ಗುರು ಶೋಧಕ್ಕಾಗಿ ಉತ್ತರ ಭಾರತದ ಕಡೆಗೆ ಹೊರಟರು.
ಗುರು ಕೃಪೆ
ಮರಾಠೆವಾಡೆಯಲ್ಲಿ ನಾಂಡೇಡದಿಂದ ಸ್ವಲ್ಪ ದೂರದಲ್ಲಿ ಏಳೇಂಗಾವ ಎಂಬುವ ಹಳ್ಳಿ ಇದೆ‌. ಅಲ್ಲಿಯ ಕಾಶೀನಾಥ ಪಂತ ಮತ್ತು ಪಾರ್ವತಿ ಬಾಯಿಯವರ ಪುತ್ರ ತುಕಾರಾಮರು ಮಹಾ ತಪಸ್ವಿಗಳು ಮತ್ತು ಯುಗ ಪುರುಷರು ಆಗಿದ್ದರು. ಶ್ರೀ ಮಹಾರಾಜರು ಗುರು ಶೋಧದಲ್ಲಿ ತುಕಾರಾಮರ ಹತ್ತಿರ ಶಿಷ್ಯತ್ವವನ್ನು ಕೇಳಲು ಬಂದಾಗ ತುಕಾರಾಮರು ಮಹಾರಾಜರಿಗೆ ಹೊಡೆಯುತ್ತಿದ್ದರು, ಶಿಕ್ಷೆಕೊಡುತ್ತಿದ್ದರು ಆದರು ಶ್ರೀ ಮಹಾರಾಜರು ತುಕಾರಾಮರು ಹೇಳಿದ ಕೆಲಸಗಳನ್ನು ನಿಸ್ಸಂಕೋಚದಿಂದ ಚಾಚು ತಪ್ಪದೇ ಮಾಡುತ್ತಿದ್ದರು‌. ಒಂದು ರಾಮನವಮಿಯ ದಿವಸ ಉರಿ ಬಿಸಿಲಿನಲ್ಲಿ ಒಂದು ಅಡವಿಗೆ ಹೋದರು. ಹತ್ತಿರದ ಒಂದು ಕೆರೆಯಲ್ಲಿ ಇಬ್ಬರು ಸ್ನಾನ ಮಾಡಿದರು. ನಂತರ ಅಶೋಕ ವೃಕ್ಷದ ಕೆಳಗೆ ಶ್ರೀ ಮಹಾರಾಜರನ್ನು ಕೂಡಿಸಿ ಕೊಂಡು ಹೀಗೆ ಹೇಳಿದರು “ನಾನು ನಿನಗೆ ಇಷ್ಟು ದಿವಸ ಬಹಳ ಕಷ್ಟ ಕೊಟ್ಡಿದ್ದೇನೆ.ಆದರೆ ಹಿಂದೆ ವಸಿಷ್ಠರು ಶ್ರೀ ರಾಮಚಂದ್ರನಿಗೆ ಏನು ಕೊಟ್ಟಿದ್ದರೊ ಅದ್ದನೇ ನಾನು ನಿನಗೆ ಈ ಕ್ಷಣ ಕೊಟ್ಟಿದ್ದೇನೆ!” ಹೀಗೆ ಹೇಳಿ ತುಕಾಮಯಿಯು ಶ್ರೀ ಮಹಾರಾಜರ ತಲೆಯ ಮೇಲೆ ಕೈ ಇಟ್ಟರು. ಶ್ರೀ ಮಹಾರಾಜರಿಗೆ ಸಮಾಧಿ ಹತ್ತಿತ್ತು. ಬಹಳ ಹೊತ್ತಿನ ನಂತರ ಸಮಾಧಿ ಇಳಿದ ಮೇಲೆ ಬ್ರಹ್ಮಚೈತನ್ಯ ಎಂದು ಹೆಸರು ಇಟ್ಟರು ಮತ್ತು ಅತ್ಯಂತ ಪ್ರೇಮದಿಂದ ಆಲಿಂಗನ ಮಾಡಿಕೊಂಡರು. “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಈ ತ್ರಯೋದಶಿ ಅಕ್ಷರೀ ಮಂತ್ರವನ್ನು ಜಪಿಸಿ ರಾಮೋಪಾಸನೆ ಮಾಡು ಎಂದು ಹೇಳಿ ತುಕಾಮಯಿ ಶ್ರೀ ಮಹಾರಾಜರಿಗೆ ರಾಮದಾಸೀ ದೀಕ್ಷೆಯನ್ನು ಕೊಟ್ಟರು ಮತ್ತು ಅನುಗ್ರಹ ಕೊಡುವ ಅಧಿಕಾರವನ್ನು ಕೊಟ್ಟರು. ಅನುಗ್ರಹವಾದ ಮೇಲೆ ಕೆಲಕಾಲದವರೆಗೆ ತುಕಾರಾಮರ ಹತ್ತಿರ ಮಹಾರಾಜರು ಇದ್ದರು ನಂತರ ಅವರು ನೈಮಿಷಾರಣ್ಯದ ಕಡೆಗೆ ಪ್ರಯಾಣ ಬೆಳೆಸಿದರು.
ಶ್ರೀ ಮಹಾರಾಜರು ಮನೆ ಬಿಟ್ಟು ೮ ವರ್ಷಗಳಾಗಿದ್ದವು ಅವರು ಮನೆಯಲ್ಲಿ ಇಲ್ಲವಂದು ತಂದೆ ರಾವಾಜಿ ಮತ್ತು ತಾಯಿ ಗೀತಾಬಾಯಿಯವರು ತುಂಬಾ ನೊಂದಿದ್ದರು. ಶ್ರೀ ಮಹಾರಾಜರಿಗೆ “ಅಣ್ಣಾ” ಎಂಬ ತಮ್ಮನು “ಮುಕ್ತಾ” ಎಂಬ ತಂಗಿಯು ಇದ್ದರು. ಅವರನ್ನು ನೋಡಿ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳತ್ತಿದ್ದರು. ನಂತರ ಮಹಾರಾಜರು ಒಂದು ದಿನ ನಾಲ್ಕು ಜನ ಗೋಸಾವಿಯ ಸಂಗಡ ಗೋಂದಾವಲಿಯ ಮಾರುತಿ ಮಂದಿರಕ್ಕೆ ಬಂದು. ಗುಡಿಯ ಮುಂದೆ ಧ್ಯಾನಸ್ಥರಾಗಿ ಕುಳತಾಗ ಮಾರುತಿ ಮಂದಿರದಲ್ಲಿ ಯಾರೋ ಮಹಾತ್ಮರು ಬಂದಿರುವರೆಂದು ಊರಿಗೆ ಸುದ್ದಿ ಹಬ್ಬಿತ್ತು. ಎಲ್ಲರೂ ದರ್ಶನಕ್ಕೆ ಬರ ತೊಡಗಿದರು. ಸಂಜೆಯ ವೇಳೆಯಲ್ಲಿ ಗೀತಾಬಾಯಿ ಮತ್ತು ರಾವಾಜಿ ಅವರ ದರ್ಶನಕ್ಕೆ ಬಂದರು ಆಗ ಮಹಾರಾಜರು ಅವರನ್ನು ನೋಡಿ ಮನಸ್ಸಿನಲ್ಲಿ ಸಾಷ್ಠಾಂಗ ಸಮಸ್ಕಾರ ಮಾಡಿ ಅವರ ತಾಯಿಗೆ ನಿಮ್ಮ ಮಗ ಇನ್ನೊಂದು ವರ್ಷದಲ್ಲಿ ಬರುತ್ತಾನೆ ಅಂತ ಹೇಳಿ ಅಲ್ಲಿಂದ ಏಳೇಂಗಾವಕ್ಕೆ ಬಂದರು. ತುಕಾಮಯಿಯ ದರ್ಶನ ಪಡೆದು ಸರಿಯಾಗಿ ಒಂದು ವರ್ಷಕ್ಕೆ ಗೋಂದಾವಲೆಗೆ ಬಂದರು. ಆಗ ತಮ್ಮ ಮನೆಯ ಮುಂದೆ ನಿಂತು “ಜಯ ಜಯ ರಘುವೀರ ಸಮರ್ಥ” ಎಂದು ಭಿಕ್ಷೆ ತೆಗೆದುಕೊಂಡು ತನ್ನ ತಾಯಿಗೆ ನಿಮ್ಮ ಹುಡುಗ ನಾಳೆ ನಿಮಗೆ ಭೇಟಿಯಾಗುವನು ಎಂದು ಮತ್ತೆ ಮಂದಿರದಲ್ಲಿ ಮುಕ್ಕಾಮ ಹೂಡಿದರು. ಮರುದಿನ ಮತ್ತೆ ತಮ್ಮ ಮನೆ ಮುಂದೆ ಹೋಗಿ “ಜಯ ಜಯ ರಘುವೀರ ಸಮರ್ಥ” ಎಂದು ಒದರಿ ನಿಂತಿರಲು ಗೀತಾಬಾಯಿ ಭಿಕ್ಷೆಯನ್ನು ತೆಗೆದುಕೊಂಡು ಹೊರಗೆ ಬಂದರು. “ತಾಯೀ ಇದು ನನಗೆ ಬೇಡ ಅಡಗೆ ಮನೆಯ ಮೂಲೆಯಲ್ಲಿ ಗಟ್ಟಿ ಮೊಸರಿನ ಕಲ್ಲು ಇದೆಯಲ್ಲವೇ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದರು. ಆಗ ಅವರಿಗೆ ಅವರ ಮಗನ ಗುರುತು ಸಿಕ್ಕಿತು ತಕ್ಷಣ ಗಟ್ಟಿಯಾಗಿ ಅಪ್ಪಿಕೊಂದಳು ಮತ್ತು ಮಹಾರಾಜರು ಅವರ ತಾಯಿಗೆ ಸಾಷ್ಠಾಂಗ ನಮಸ್ಕಾರ ಮಾಡಿದರು. ಲಿಂಗೋಪಂತರು ಹೋಗಿ ಹತ್ತು ಹನ್ನೆರಡು ವರ್ಷಗಳಾಗಿದ್ದರೂ ಪಂತರ ಹೆಸರನ್ನು ಅಲ್ಲಿಯ ಜನರು ಮರೆತಿರಲಿಲ್ಲ ಅಂತೆಯೇ ಪಂತರ ಮೊಮ್ಮಗನೂ ದೊಡ್ಡ ಸಾಧುವಾಗಿ ಗೋಂದಾವಲೆಗೆ ಬಂದಿದ್ದಾನೆ ಎಂಬ ಸುದ್ದಿ ಸುತ್ತಲೂ ಹರಡಿ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನರು ಅವರ ದರ್ಶನಕ್ಕೆ ಬರಲು ಶುರುಮಾಡಿದರು. ಬಹಳಾ ಜನರು ದರ್ಶನಕ್ಕೆ ಬರುತ್ತಿದ್ದರಿಂದ ಅವರ ಮನೆಯ ಮುಂದಿನ ವಿಠ್ಠಲ ಮಂದಿರದಲ್ಲಿ ವಾಸ್ತವ್ಯ ಮಾಡಿದರು. ಗೋಂದಾವಲೆಯ ಮತ್ತು ಅಕ್ಕಪಕ್ಕದ ಗ್ರಾಮಗಳ ಜನರು ಶ್ರೀ ಮಹಾಜರಿಗೆ “ಗಣೂ ಬುವಾ” ಎಂದು ಕರೆಯುತ್ತಿದ್ದರು.
ಮುಂದೆ ಮಹಾರಾಜರ ಪತ್ನಿ ಗರ್ಭವತಿಯಾಗಿ ನವಮಾಸ ತುಂಬಿದ ನಂತರ ಒಂದು ಸುಂದರವಾದ ಗಂಡು ಮಗುವಿಗೆ ಜನ್ಮವಿತ್ತರು ಆದರೆ ಆ ಮಗುವು ಅಲ್ವಾಯುಷ್ಯವಾದ್ದರಿಂದ ಅವರ ಮಗು ಮತ್ತು ಪತ್ನಿ ಕಾಲವಶವಾದರು‌. ಗೋಂದಾವಲೆಯಿಂದ ಸ್ವಲ್ಪ ದೂರದಲ್ಲಿ ಆಟವಾಡಿ ಎಂಬ ಗ್ರಾಮವಿದೆ. ಅಲ್ಲಿ ಸಖಾರಾಮಪಂತ ದೇಶಪಾಂಡೆ ಎಂಬ ಒಬ್ಬರ ಮಗಳನ್ನು(ಕುರುಡು) ತನ್ನ ತಾಯಿಯ ಇಚ್ಚೆಯಂತೆ ಇನ್ನೊಂದು ಲಗ್ನ ಮಾಡಿಕೊಂಡ ಮಹಾರಾಜರು ಬಂದರು.
ಗೋಂದಾವಲೆಯಲ್ಲಿ ರಾಮ‌ ಮಂದಿರ
ಪಂಢರಪುರಕ್ಕೆ ಹೋಗುವ ದಾರಿಯಲ್ಲಿ ಗೋಂದಾವಲೆ ಇರುವುದರಿಂದ ಸಾಧು, ಸನ್ಯಾಸಿ ಮತ್ತು ಬೈರಾಗಿ ಜನರು ಗೋಂದಾವಲೆಯಲ್ಲಿ ಮುಕ್ಕಾಮು ಮಾಡುತ್ತಿದ್ದರಿಂದ ಅಲ್ಲಿಯೇ ಒಂದು ರಾಮ ಮಂದಿರ ಕಟ್ಟುವ ನಿರ್ಧರ ಮಾಡಿದರು ನಂತರ ಮಂದಿರ ಕಟ್ಟುವ ಕೆಲಸ ಪ್ರಾರಂಭಿಸಿದರು. ಶಕೆ ೧೮೧೩ ಅಂದರೆ ೧೮೯೧ರಲ್ಲಿ ಒಂದು ಭವ್ಯವಾದ ರಾಮ ಮಂದಿರ ನಿರ್ಮಾಣವಾಯಿತು. ಸಮಾರಂಭದ ಆಮಂತ್ರಣ ಪತ್ರಿಕೆಗಳನ್ನು ಊರೂರಿಗೆ ಕಳುಹಿಸಿದರು. ಉತ್ಸವದ ಉದ್ಘಾಟನೆಯ ದಿನ ಶ್ರೀ ಮಹಾರಾಜರು ಸ್ವತಃ ರಾಮನ ಮುಂದೆ ತೆಂಗಿನಕಾಯಿ ಇಟ್ಟು ಭಜನೆ ಮತ್ತು ಅಖಂಡ ನಾಮಸ್ಮರಣೆಯ ಮೂಲಕ ಪ್ರಾರಂಭ ಮಾಡಿದರು. ಮಂದಿರದಲ್ಲಿ ಶ್ರೀ ರಾಮನ ಪ್ರತಷ್ಠಾಪನೆಯು ವಿರ್ಜಂಭಣೆಯಿಂದ ನಡೆಯಿತು. ಈ ಸಮಾರಂಭಕ್ಕೆ ನೀರಿನಂತೆ ಧನವನ್ನು ಖರ್ಚು ಮಾಡಿದರು. ಕಾಶಿ, ಪ್ರಯಾಗ, ಅಯೋಧ್ಯೆ, ಪುಣೆ, ವಾಯಿ, ಸಾತಾರಾ, ಹುಬ್ಬಳ್ಳಿ, ಧಾರವಾಡ ಮೊದಲಾದ ಸ್ಥಳಗಳಿಂದ ದೊಡ್ದ ದೊಡ್ಡ ವಿದ್ವಾಂಸರು, ಪಂಡಿತರು, ವೈದಿಕರು ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮರಾಯನ ಪ್ರಣ ಪ್ರತಿಷ್ಠೆಯ ಸಮಾರಂಭದಲ್ಲಿ ಎಲ್ಲಾ ಜನಸ್ತೋಮದ ಆಕರ್ಷಕ ಕೇಂದ್ರಬಿಂದುವು “ಶ್ರೀ ಮಹಾರಾಜರೆ” ಆಗಿದ್ದರು. ರಾಮರಾಯನ ಅಭಿಷೇಕಕ್ಕೆ ದೊಡ್ಡ ದೊಡ್ಡ ಪುಣ್ಯ ನದಿಗಳ ಮತ್ತು ಸಮುದ್ರದ ನೀರು ತರಿಸಲಾಗಿತ್ತು. ಇಡೀ ಊರ ಜನರಿಗೆ ಅನ್ನ ಸಂತರ್ಪಣೆಯು ೮ ದಿನಗಳು ನಡೆದವು. ಅಲ್ಲಿ ಮಾಡಿದ ಅನ್ನದಾನಕ್ಕೆ ಪರಿಮಿತಿಯೇ ಇರಲ್ಲಿಲ್ಲ. ನಂತರದ ವರ್ಷಗಳಲ್ಲಿ ಇಡೀ ಭರತ ಖಂಡವನ್ನು ಸಂಚರಿಸಿ ಹಲವಾರು ಸ್ಥಳಗಳಲ್ಲಿ ರಾಮ ಮಂದಿರ ಸ್ಥಾಪಿಸಿದರು. ಅದರಲ್ಲಿ ಹಳೆಯ ಇಂದುರಿನಲ್ಲಿನ ರಾಮ ಮಂದಿರ, ಹರ್ದಾದಲ್ಲಿನ ರಾಮ ಮಂದಿರ, ಪಂಢರಪುರದ ರಾಮ ಮಂದಿರ, ಕಾಗವಾಡದ ರಾಮ ಮಂದಿರ. ಮೈಸೂರು ಪ್ರಾಂತ್ಯದ ಈಗಿನ ಕರ್ನಾಟಕದ ಚಿಂತಾಮಣಿಯ ರಾಮ ಮಂದಿರ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವತ್ಥಪುರದ ರಾಮ ಮಂದಿರ – ಅಶ್ವತ್ಥಪುರದ ರಾಮನ ಸ್ಥಾಪನೆಯನ್ನು ಶ್ರೀ ಬ್ರಹ್ಮಾನಂದ ಮಹಾರಾಜರು ಮಾಡಿದರು, ಹಾಗೆ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಆಜ್ಞೆಯಾಗಿತ್ತು. ದಕ್ಷಿಣ ಕಡೆಯ ಪದ್ದತಿಯ ಮಂದಿರವಿದ್ದು ಇಲ್ಲಿ ಉಪಾಸನೆಯು ಮಹಾರಾಜರ ಆಜ್ಞೆಯಂತೆ ಈಗಲೂ ಚೆನ್ನಾಗಿ ನಡೆಯುತ್ತಿರುತ್ತದೆ.
ಶಕೆ ೧೮೩೫ ಅಂದರೆ ೧೯೧೩ರಲ್ಲಿ ಶ್ರೀ ಮಹಾರಾಜರು ಮಾಡಿದ ಕೊನೆಯ ರಾಮನವಮೀ ಉತ್ಸವ. ತಮ್ಮ ಶಿಷ್ಯರಿಗೆ ತಾವೇ ಸ್ವತಃ ಪತ್ರ ಬರೆದು ರಾಮನವಮೀ ಉತ್ಸವಕ್ಕೆ ಕರೆಸಿಕೊಂಡರು. ತಾರೀಖು ೨೨ಡಿಸೆಂಬರ್ ೧೯೧೩ರಂದು ರಾಮರಾಯನ ಆರತಿ ಆದ ಮೇಲೆ ಶ್ರೀ ಮಹಾರಾಜರು ಸಿಂಹಾಸನದ ಮೇಲೆ ಕೂತರು. ಅಲ್ಲಿಗೆ ಬಂದ ಭಕ್ತರಿಗೆ ದರ್ಶನ ಕೊಟ್ಟು ಒಂದು ಕೋಣೆಯೊಳಗೆ ಹೋದರು, ಅವರ ಸಂಗಡ ಅವರ ಆತ್ಮೀಯರಾದ ಹರಿಪಂತ ಮಾಸ್ತರ್, ವಾಮನರಾವ ಜ್ಞಾನೇಶ್ವರಿ ಮೊದಲಾದವರು ಇದ್ದರು. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ನಂತರ ಎದ್ದು ಸಿದ್ದಾಸನ ಹಾಕಿ ಕೂತು ವಾಮನರಾವರ ಜೊತೆಗೆ ಶೌಚ ಮುಖ ಮಾರ್ಜನಾದಿಗಳನ್ನು ಮುಗಿಸಲು ನದಿಯ ಕಡೆಗೆ ತೆರಳಿ ಕೈಕಾಲು ತೊಳೆದು ಹದಿನೈದು ನಿಮಿಷದಲ್ಲಿ ತಿರುಗಿ ಬಂದರು. ನಂತರ ರಾಮನ ಮುಂದೆ ಸಾಷ್ಠಾಂಗ ನಮಸ್ಕಾರ ಹಾಕಿದರು ಮತ್ತು “ನನ್ನ ಜನರನ್ನು ಸಂಭಾಳಿಸು” ಎಂದು. “ಎಲ್ಲಿ ನಾಮವೋ ಅಲ್ಲಿ ನನ್ನ ಪ್ರಾಣ! ಈ ಗುರುತನ್ನು ಜತನ ಮಾಡಬೇಕು!” ಎಂದು ಹೇಳಿ ಅಲ್ಲಿದ್ದವರ ತಲೆಯ ಮೇಲೆ ಕೈಯಾಡಿಸಿ ಮಹಾ ಸಮಾಧಿಗೆ ಹೋದರು.ಶ್ರೀ ಮಹಾರಾಜರು ಕಣ್ಣು ಮುಚ್ಚಿದರು, ಅಮೃತ ಘಳಿಗೆಯು ಪ್ರಾರಂಭವಾಯಿತು. ಅವರ ಶ್ವಾಸವು ಬಹಳ ಜೋರಾಗಿ ಬರುತ್ತಿತ್ತು. ಸಮಯ ಆರು ಹೊಡೆಯಲು ಹತ್ತು ನಿಮಿಷ ಇದ್ದಾಗ ಅವರ ಪ್ರಾಣ ಪಕ್ಷಿಯು ಹಾರಿಹೋಯಿತು.
ಜಗತ್ತಿಗೆ ಬೆಳಕು ಕೊಡುವ ಭೌತಿಕ ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರಲು ಅತ್ತ ಗೋಂದಾವಲೆಯ ಈ ಆಧ್ಯಾತ್ಮ ಸೂರ್ಯನು ಮುಳುಗಿದನು ಮತ್ತು ಶಾಶ್ವತವಾಗಿ ಮರೆಯಾದನು‌. ಒಂದು ಅತ್ಯಂತ ದಿವ್ಯ ಜೀವನದ ಕೊನೆಯ ಅಂಕಣ ಮುಗಿಯಿತು. ಶ್ರೀ ಮಹಾರಾಜರು ಎಲ್ಲಿಂದ ಬಂದರೋ ಅಲ್ಲಿಗೆ ಹೋದರು! ಅವರ ಇಚ್ಛೆಯಂತೆ ಅವರದೇ ಗೋ ಶಾಲೆಯಲ್ಲಿ ಅವರ ಅಂತಿಮ ವಿಧಿ ವಿಧಾನಗಳನ್ನು ನಾಮ ಸ್ಮರಣೆಯ ಮೂಲಕ ಮಾಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!