ಶಿರ್ವ: ಧರ್ಮ, ದೇವರ ಹೆಸರಿನಲ್ಲಿ ಗಲಭೆ, ವೈಮನಸ್ಸು ನಡೆಯುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಸೌಹಾರ್ದತೆಗೆ ಪೂರಕವಾಗುವ ಘಟನೆಯೊಂದು ನಡೆದಿದೆ.
ಕ್ರೈಸ್ತ ಮತಾವಲಂಬಿಯಾದರೂ ವಿನಾಯಕನ ಪರಮ ಭಕ್ತ, ಉದ್ಯಮಿ ಗ್ಯಾಬ್ರಿಯೆಲ್ ನಜ್ರೆತ್ ಶಿರ್ವ- ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್ ನಲ್ಲಿನ ತಮ್ಮ ಹಿರಿಯರ ಜಾಗದಲ್ಲಿ ಗಣಪತಿ ದೇವಾಲಯ ನಿರ್ಮಿಸಿದ್ದು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಆ ಮೂಲಕ ಗ್ಯಾಬ್ರಿಯಲ್ ಅವರ ಬಹುಕಾಲದ ಕನಸು ನನಸಾಯಿತು.
ಸುಮಾರು 1.5 ಕೋ. ರೂ. ವೆಚ್ಚದಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ನಿರ್ಮಿಸಲಾದ ಶಿಲಾಮಯ ಗಣಪತಿ ಆಲಯ ಉದ್ಘಾಟಿಸಿದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶಿರ್ವದಲ್ಲಿ ಸಿದ್ಧಿವಿನಾಯಕ ಸ್ಥಿರವಾಗಿ ನೆಲೆಯಾಗಿದ್ದಾನೆ. ಲೋಕದ ಸಂಕಷ್ಟ ದೂರಮಾಡಿ, ಆಚಂದ್ರಾರ್ಕವಾಗಿ ಜನತೆ ಆರೋಗ್ಯವಂತರಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಲಿ. ಅನ್ಯ ಧರ್ಮೀಯರಾದರೂ ಸೌಹಾರ್ದ ಮನೋಭಾವವುಳ್ಳ ಗ್ಯಾಬ್ರಿಯಲ್ ಕಾರ್ಯ ಮಾದರಿ ಎಂದರು.
ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಸಾನ್ನಿಧ್ಯ ವಹಿಸಿದ್ದರು.
ಉಡುಪಿ ಕನ್ನರ್ಪಾಡಿ ಜ್ಯೋತಿಷ್ಯ ವಿದ್ವಾನ್ ಸಂದೀಪ್ ಉಪಾಧ್ಯಾಯ ನೇತೃತ್ವದಲ್ಲಿ ವೈದಿಕ ವೃಂದದವರು ಧಾರ್ಮಿಕ ವಿಧಿ ವಿಧಾನ ನಡೆಸಿದರು.
ದೇವಳದ ನಿರ್ಮಾತೃ ಗ್ಯಾಬ್ರಿಯಲ್ ನಜ್ರೆತ್, ದೇವಳ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಉಭಯ ಶ್ರೀಗಳವರನ್ನು ಸ್ವಾಗತಿಸಿ, ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಲಿಮಾರು ಶ್ರೀಗಳ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ, ಪಡುಬೆಳ್ಳೆ ಪರಶುರಾಮ ಭಟ್, ಭಜಕ ವೃಂದದವರ ಇದ್ದರು.
ಕನ್ನರ್ಪಾಡಿ ಸಂದೀಪ ಉಪಾಧ್ಯಾಯ ನೇತೃತ್ವದಲ್ಲಿ ಬಿಂಬಾಧಿವಾಸ, ವಾಸ್ತು- ಅಘೋರ ಹೋಮ, ತತ್ವಹೋಮ, ಶಕ್ತಿಯಾಗ, ಪೀಠಿಕಾ ಯಾಗ, ಬಿಂಬ ಪ್ರತಿಷ್ಠೆ, ಭದ್ರಮಂಡಲ ಪೂಜೆ ಇತ್ಯಾದಿ ಪ್ರತಿಷ್ಠಾ ವಿಧಿ ವಿಧಾನಗಳು ನಡೆದವು.
ಶುಕ್ರವಾರ ಗಣಹೋಮ, ಬ್ರಹ್ಮಕಲಶಾಭಿಷೇಕ, ರಾತ್ರಿ ಮಹಾರಂಗಪೂಜೆ ಇತ್ಯಾದಿ ಕಾರ್ಯಕ್ರಮ ನಡೆಯಿತು.
ಸಿದ್ಧಿವಿನಾಯಕ ದೇವಸ್ಥಾನ ನಿರ್ಮಿಸಬೇಕೆಂಬುದು ನನ್ನ ಬಲುಕಾಲದ ಹಿಂದಿನ ಕನಸು. ಅದು ಇಂದು ನನಸಾಗಿದೆ. ಶಿರ್ವದಲ್ಲಿ ನೆಲೆಯಾದ ವಿನಾಯಕ ಸರ್ವರ ದುಃಖ ದುಮ್ಮಾನಗಳನ್ನು ಪರಿಹರಿಸಿ, ಎಲ್ಲರಿಗೂ ಸಕಲಾಭೀಷ್ಟಪ್ರದಾಯಕನಾಗಲಿ.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ದೇವರು ಕೊಟ್ಟ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಬೇಕಾದುದು ಕರ್ತವ್ಯ. ಕ್ರೈಸ್ತ ಮತಾವಲಂಬಿಯಾದರೂ ಅದೇಕೋ ಏನೋ ನನಗೆ ಗಣಪತಿಯಲ್ಲಿ ವಿಶೇಷ ಭಕ್ತಿ. ಹಾಗಂತ ಕ್ರಿಸ್ತಸ್ವಾಮಿಯನ್ನು ಉಪೇಕ್ಷಿಸಿದವನು ನಾನಲ್ಲ.
ಮೇ ತಿಂಗಳ ಆರಂಭದಲ್ಲಿ ನಡೆಯಬೇಕಾಗಿದ್ದ ದೇವಳದ ಪ್ರತಿಷ್ಠಾ ಮಹೋತ್ಸವ ಕೋವಿಡ್ ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟು ಇದೀಗ ಸಂಪನ್ನವಾಗಿದೆ. ತನಗೆ ಅತೀವ ಖುಷಿಯಾಗಿದೆ.
ಗ್ಯಾಬ್ರಿಯೆಲ್ ನಾಜ್ರೆತ್, ದೇವಳ ನಿರ್ಮಾತೃ