ಸುದ್ದಿಕಿರಣ ವರದಿ
ಭಾನುವಾರ, ಜುಲೈ 10
ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ಸಂಪನ್ನ
ಉಡುಪಿ: ಶಯನೀ ಏಕಾದಶಿ ಪ್ರಯುಕ್ತ ಭಾನುವಾರ ಶ್ರೀಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯ ಅವರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು.
ಹೋಮಾಗ್ನಿಯಲ್ಲಿ ದಹಿಸಿದ ಶಂಖ ಚಕ್ರ ಇತ್ಯಾದಿ ವಿಷ್ಣುಲಾಂಛನಗಳನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮೊದಲಿಗೆ ತಾವೇ ಸ್ವಯಂ ಮುದ್ರಾಧಾರಣೆ ಮಾಡಿಕೊಂಡರು. ಬಳಿಕ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.
ಬಳಿಕ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರೂ ಭಕ್ತಾದಿಗಳಿಗೆ ಮುದ್ರಾಧಾರಣೆ ನಡೆಸಿದರು.
ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.