ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕರಂಬಳ್ಳಿ ಶ್ರೀ ವೇಂಕಟರಮಣಸ್ವಾಮಿಗೆ ಶಾರ್ವರಿ ಸಂವತ್ಸರ ಪುಷ್ಯ ಮಾಸ ಪಂಚಮಿ ಸೋಮವಾರ ಶುಭದಿನದಂದು ಬೆಳಿಗ್ಗೆ 10.41ರ ಸುಮುಹೂರ್ತದಲ್ಲಿ ಮಹಾಸ್ನಪನ ನಡೆಸುವ ಮೂಲಕ ಶ್ರೀ ದೇವರ ಪುನಃಪ್ರತಿಷ್ಠಾಂಗ ಬ್ರಹ್ಮಕಲಶಾಭಿಷೇಕ ಸಂಪನ್ನಗೊಂಡಿತು.
ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ವೇದಘೋಷ, ಚೆಂಡೆ- ವಾದ್ಯ ನಿನಾದದೊಂದಿಗೆ ನಡೆದ ಮಹಾಭಿಷೇಕದಲ್ಲಿ ಭಕ್ತರ ಭಕ್ತಿಯುಕ್ತವಾದ ಜಯಘೋಷ ಮುಗಿಲು ಮುಟ್ಟಿತ್ತು.
ಶ್ರೀದೇವಳದ ಆಡಳಿತ ಮೊಕ್ತೇಸರ, ಶಾಸಕ ರಘುಪತಿ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಕೀಲ ದಿವಾಕರ ಶೆಟ್ಟಿ, ಉಪಾಧ್ಯಕ್ಷ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಕಪ್ಪೆಟ್ಟು ಪ್ರವೀಣ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಕೆ. ಗೋಪಾಲ ಶೆಟ್ಟಿ, ಶೇಖರ ಜತ್ತನ್ನ, ಲಕ್ಷ್ಮಣ ಸೇರಿಗಾರ, ಲಕ್ಷ್ಮೀನಾರಾಯಣ ಆಚಾರ್ಯ, ಸುಂದರ ಅಮೀನ್ ಮತ್ತು ಶೈಲಶ್ರೀ ದಿವಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ ಬಾರಿತ್ತಾಯ, ಸಾಮಾಜಿಕ ಸಂಘಟಕ ಜಿ. ವಾಸುದೇವ ಭಟ್ ಪೆರಂಪಳ್ಳಿ ಇದ್ದರು.
ಬಳಿಕ ಮಹಾಅನ್ನಸಂತರ್ಪಣೆ ನಡೆಯಿತು.