ಸುದ್ದಿಕಿರಣ ವರದಿ
ಗುರುವಾರ, ಫೆಬ್ರವರಿ 17
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಖುಷಿಯಾಗಿಸಲು ಯತ್ನ
ಮಣಿಪಾಲ: ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆ ಮಾಡುವವರು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರಿಗೆ ಬೆಂಬಲ ವ್ಯಕ್ತಪಡಿಸಲು ಜಾಗತಿಕವಾಗಿ ಪ್ರತಿವರ್ಷ ಫೆ. 15ರಂದು ಆಚರಿಸುವ ಅಂತಾರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನವನ್ನು ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯಲ್ಲಿ ವರ್ಚುವಲ್ ಆಗಿ ಆಚರಿಸಲಾಯಿತು.
ಆ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರನ್ನು ಆರೈಕೆ ಮಾಡುವವರನ್ನು ಖುಷಿಯಾಗಿಸಲು ಯತ್ನಿಸಲಾಯಿತು.
ಶಂಕರ್ ಮಹಾದೇವನ್ ಅಕಾಡೆಮಿ ನಿರ್ವಾಣ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಮಕ್ಕಳ ಆರೈಕೆ ಮಾಡುವವರಿಗೆ ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ರಸಪ್ರಶ್ನೆ ನಡೆಸಲಾಯಿತು.
ಎಸ್.ಎಂ.ಎ ನಿರ್ವಾಣ ಸಂಸ್ಥೆಯ ಶಂಕರ್ ಮಹಾದೇವನ್ ಅಕಾಡೆಮಿ ಟ್ರಸ್ಟ್ ನ ಭಾಗವಾಗಿದ್ದು, ಕ್ಯಾನ್ಸರ್ ರೋಗಿಗಳಂತೆ ಜೀವನದಲ್ಲಿ ಪ್ರತಿದಿನ ತೀವ್ರ ಸವಾಲುಗಳನ್ನು ಎದುರಿಸುತ್ತಿರುವ ಮಂದಿಗೆ ಸಂಗೀತದ ಮೂಲಕ ಸಂತೋಷ ಮೂಡಿಸುವ ಪ್ರಯತ್ನ ಮಾಡುತ್ತಿದೆ.
ಮೋಕ್ಷಾ ಹಾಗೂ ಆಕಾಂಕ್ಷಾ ಎಂಬೀರ್ವರು ಮಕ್ಕಳು ಅಕಾಡೆಮಿ ಕಲಾವಿದೆ ಸುಕೃತಿ ಅಜಯ್ ಕುಮಾರ್ ಜೊತೆ ಪ್ರದರ್ಶನ ನೀಡಿದರು.
ಮಕ್ಕಳು ಮತ್ತು ಅವರನ್ನು ಆರೈಕೆ ಮಾಡುವವರ ಮನಸ್ಸನ್ನು ಹಗುರಗೊಳಿಸಲು ಹಾಗೂ ಕಾಯಿಲೆ ಶೀಘ್ರ ಗುಣಮುಖವಾಗಿಸುವ ನಿಟ್ಟಿನಲ್ಲಿ ಇಂಥ ಮನರಂಜನ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ವಿಭಾಗ ಮುಖ್ಯಸ್ಥ ಡಾ. ವಾಸುದೇವ ಭಟ್ ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ತಂಡ ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ರೋಗಿಗಳು ಮತ್ತು ಆರೈಕೆ ಮಾಡುವವರಿಗೆ ಮನರಂಜನೆ ನೀಡುವ ಪ್ರಯತ್ನ ಶ್ಲಾಘನೀಯ ಎಂದರು.
ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ತಂಡವನ್ನು ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಅಭಿನಂದಿಸಿದರು.
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್. ಸಾಲಿನ್ಸ್, ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕೃತಿಕಾ ರಾವ್ ಇದ್ದರು