Thursday, December 2, 2021
Home ಕ್ರೀಡೆ ಹಿರಿಯ ನಾಗರಿಕರ ಕ್ರೀಡಾ ಪ್ರವೃತ್ತಿ ಯುವ ಜನತೆಗೆ ಸ್ಪೂರ್ತಿಯಾಗಬೇಕು

ಹಿರಿಯ ನಾಗರಿಕರ ಕ್ರೀಡಾ ಪ್ರವೃತ್ತಿ ಯುವ ಜನತೆಗೆ ಸ್ಪೂರ್ತಿಯಾಗಬೇಕು

ಹಿರಿಯ ನಾಗರಿಕರ ಕ್ರೀಡಾ ಪ್ರವೃತ್ತಿ ಯುವ ಜನತೆಗೆ ಸ್ಪೂರ್ತಿಯಾಗಬೇಕು
(ಸುದ್ದಿಕಿರಣ ವರದಿ)

ಉಡುಪಿ: ಹಿರಿಯ ನಾಗರಿಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು, ವಯೋಮಾನಕ್ಕೆ ತಕ್ಕ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದರು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮವನ್ನು ವಿಕೆಟ್ ಗೆ ರಿಂಗ್ ಹಾಕುವ ಮೂಲಕ ಚಾಲನೆ ನೀಡಿದರು.

ವಯಸ್ಸಿನ ನಿರ್ಬಂಧವಿಲ್ಲ
ಕ್ರೀಡೆಯಲ್ಲಿ ಭಾಗವಹಿಸಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲ. ಕ್ರಿಯಾಶೀಲ ಮನಸ್ಸು ಮತ್ತು ಆರೋಗ್ಯಯುತ ಶರೀರವನ್ನು ಉತ್ತಮವಾಗಿರಿಸಿಕೊಳ್ಳಲು ಹಿರಿಯ ನಾಗರಿಕರು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು.

ಕೊರೊನಾ ಸಂಕಷ್ಟದ ಸಂದಿಗ್ಧತೆಯಲ್ಲಿ ಹಿರಿಯ ನಾಗರಿಕರು ಆರೋಗ್ಯದ ದೃಷ್ಟಿಯಿಂದ ಹೊರಗೆ ಬಾರದೇ ಸಂಕಷ್ಟದ ಪರಿಸ್ಥಿತಿ ಅನುಭವಿಸಬೇಕಾಯಿತು. ಆದ್ದರಿಂದ ಈಗ ಅದನ್ನೆಲ್ಲವನ್ನೂ ತೊಡೆದು ಮತ್ತೆ ಯುವ ಜನಾಂಗಕ್ಕೆ ಹೊಸ ಚೈತನ್ಯದ ಸಂದೇಶ ಸಾರುವಂತೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದರು.

ಬಹುಮಾನ ಮತ್ತು ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಮನೋಭಾವದ ಬದಲು ಮನೋಲ್ಲಾಸಕ್ಕಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವುದರೊಂದಿಗೆ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರು ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದು ಡಿಸಿ ಕೂರ್ಮಾರಾವ್ ಆಶಿಸಿದರು.

ಸದೃಢ ಮನಸ್ಸಿಗೆ ಕ್ರೀಡೆ ಪೂರಕ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಮಾತನಾಡಿ, ಸದೃಢ ಶರೀರದಲ್ಲಿ ಸದೃಢ ಮನಸ್ಸನ್ನು ಹೊಂದಲು ಕ್ರೀಡಾ ಚಟುವಟಿಕೆಗಳನ್ನು ಅತ್ಯವಶ್ಯಕವಾಗಿ ಅಳವಡಿಸಿಕೊಳ್ಳಬೇಕು

ಸೇವೆಯಿಂದ ನಿವೃತ್ತಿ ಹೊಂದಿದ ಹಾಗೂ ಇತರ ಹಿರಿಯ ನಾಗರಿಕರು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಖುಷಿಯಿಂದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೀಡೆಗೆ ಹೊಸ ಮೆರಗು ನೀಡಬೇಕು ಎಂದರು.
ಕ್ರೀಡಾಕೂಟದಲ್ಲಿ 60ರಿಂದ 80 ವಯೋಮಾನದ ಹಿರಿಯ ನಾಗರಿಕರು (ಪುರುಷರು ಮತ್ತು ಮಹಿಳೆಯರು) ಪ್ರತ್ಯೇಕವಾಗಿ ಕಾಲ್ನಡಿಗೆ, ವಿಕೆಟ್ ಗೆ ರಿಂಗ್ ಹಾಕುವುದು, ಕೇರಂ, ಚಿತ್ರಕಲೆ, ಗಾಯನ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಮರ್ಿಳಾ ಎಸ್, ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರತ್ನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಉಡುಪಿ ಹಿರಿಯ ನಾಗರಿಕ ಒಕ್ಕೂಟ ಅಧ್ಯಕ್ಷ ಸಿ. ಎಸ್. ರಾವ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!