Thursday, July 7, 2022
Home ಮನರಂಜನೆ ಕಲೆಯನ್ನು ಜಾತಿಗೆ ಸೀಮಿತಗೊಳಿಸುವುದು ಸಲ್ಲ

ಕಲೆಯನ್ನು ಜಾತಿಗೆ ಸೀಮಿತಗೊಳಿಸುವುದು ಸಲ್ಲ

ಉಡುಪಿ: ಜಾತಿ, ಧರ್ಮದ ಕಂದಕ ಆಳವಾಗುತ್ತಾ ಸಾಗುತ್ತಿದ್ದು, ಈ ನಡುವೆ ಕಲೆಯನ್ನೂ ಜಾತಿಗೆ ಸೀಮಿತಗೊಳಿಸುವುದು ಖೇದಕರ ಸಂಗತಿ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಇಲ್ಲಿನ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನಲ್ಲಿ ಭಾನುವಾರ ನಡೆದ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಒಂದು ಲಕ್ಷ ರೂ. ನಗದು ಸಹಿತ ಪ್ರತಿಷ್ಠಾನದ ಚೊಚ್ಚಲ ವಿಶ್ವಪ್ರಭಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಮ್ಮ ಜಾತಿ, ಧರ್ಮದ ಬಗ್ಗೆ ಅಭಿಮಾನ ಬೇಕು. ಆದರೆ, ಅಭಿಮಾನಕ್ಕೂ ಸೀಮಿತ ಚೌಕಟ್ಟು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದ ಡಾ. ಆಳ್ವ, ಧಮ್ಮ ಎಂಬುದು ಒಂದೇ. ವಿವಿಧ ಮತಗಳ ಸಾರ ಧರ್ಮ ಎಂದು ಪರಿಗಣಿಸಲ್ಪಡುತ್ತದೆ. ಎಲ್ಲ ಜಾತಿಗಳು ಮೆಳೆತಾಗ ಸಮಾಜ ನಿರ್ಮಾಣವಾಗುತ್ತದೆ. ಮತ ಮತಗಳ ನಡುವೆ, ಜಾತಿ ಜಾತಿಗಳ ನಡುವೆ ಸಾಮರಸ್ಯ ಬೇಕು. ಮನಸ್ಸು ಮನಸ್ಸುಗಳು ಒಂದಾಗಬೇಕು. ಇದು ತಾನು ಬಾಲ್ಯದಿಂದಲೂ ನಂಬಿದ್ದ, ಇಂದಿಗೂ ಪ್ರತಿಪಾದಿಸುವ ತಥ್ಯ ಎಂದರು.

ಐಶ್ವರ, ಹೆಸರು ಇತ್ಯಾದಿ ನಶ್ವರ. ಪ್ರಶಸ್ತಿಗಾಗಿ ಯಾವುದೇ ಕಾರ್ಯ ಮಾಡಕೂಡದು. ನಾವು ಮಾಡುವ ಕಾರ್ಯಗಳು ಪ್ರಶಸ್ತಿಯನ್ನು ತಂದುಕೊಡಬೇಕು. ತಾನೆಂದೂ ಪ್ರಸಿದ್ಧಿ, ಪ್ರಚಾರಗಳ ಹಿಂದೆ ಹೋದವನಲ್ಲ. ಆಕ್ಸ್ ಫಡರ್್ ವಿ.ವಿ. ನೀಡಿದ್ದ ಜಾಗತಿಕ ಶ್ರೇಷ್ಠ ಯುವ ಸಾಧಕ ಪ್ರಶಸ್ತಿಯಿಂದ ತೊಡಗಿ, ರಾಜ್ಯೋತ್ಸವ ಪ್ರಶಸ್ತಿ ವರೆಗೆ ತನಗೆ ಲಭಿಸಿರುವ ಸಹಸ್ರಾರು ಪ್ರಶಸ್ತಿ, ಸಂಮಾನಗಳ ದಾಖಲೆಯೂ ನನ್ನ ಬಳಿ ಇಲ್ಲ ಎಂದು ವಿನೀತನಾಗಿ ಹೇಳಿದರು.

ಕಲೆ, ಕ್ರೀಡೆಯೊಂದಿಗೆ ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದು ನಂಬಿ ನಡೆದ ತಾನು, ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಕಲೆ, ಸಂಸ್ಕೃತಿಗಳ ರಕ್ಷಣೆ ಸರ್ಕಾರಗಳಿಂದ ಆಗುತ್ತದೆ ಎಂಬುದು ಭ್ರಮೆ. ಅದನ್ನು ನಾವೇ ಪೋಷಿಸಬೇಕು. ಖಾಸಗಿಯಾಗಿ ನಿರ್ವಹಿಸಬೇಕು. ಆದರೆ, ಅಲ್ಲಿ ಹಣಕ್ಕೆ ಪ್ರಾಧಾನ್ಯತೆ ಕೂಡದು ಎಂದರು.

ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ಹಾಗೂ ಪ್ರಶಸ್ತಿ ಪ್ರಾಯೋಜಕ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರಭಾವತಿ ವಿ. ಶೆಣೈ ಇದ್ದರು.

ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಸ್ವತಃ ಕಲಾವಿದನಾದ ಡಾ. ಆಳ್ವ, ತನ್ನ ಶಿಕ್ಷಣ ಸಂಸ್ಥೆಯನ್ನು ಎಲ್ಲ ಸಂಸ್ಕೃತಿಗಳ ಸಂಗಮವನ್ನಾಗಿಸಿದ್ದಾರೆ. ಕ್ರೀಡೆ, ವೈದ್ಯಕೀಯ, ಕಲೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸೃಜನಶೀಲತೆಯನ್ನು ಮೂಡಿಸಿ ಆ ಮೂಲಕ ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಬಣ್ಣಿಸಿದರು.

ಉಡುಪಿ ತುಳುಕೂಟ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಶಿವಮೊಗ್ಗ ರಂಗಾಯಣ ಅಧ್ಯಕ್ಷ ಸಂದೇಶ ಜವಳಿ ಅಭ್ಯಾಗತರಾಗಿದ್ದರು. ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್ ಇದ್ದರು.

ವಿಶ್ವಪ್ರಭಾ ಪ್ರಶಸ್ತಿ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ಪ್ರಸ್ತಾವನೆಗೈದರು. ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಸ್ವಾಗತಿಸಿದರು. ನಟಿ ಶಿಲ್ಪಾ ಜೋಷಿ ನಿರೂಪಿಸಿದರು. ಪೂರ್ಣಿಮಾ ಜನಾರ್ದನ ಸಂಮಾನಪತ್ರ ವಾಚಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!