Saturday, July 2, 2022
Home ಮನರಂಜನೆ ಸಂಸ್ಕೃತಿ ತಳಹದಿಯ ಕೊಂಕಣಿ ಪುರಾತನ ಭಾಷೆ

ಸಂಸ್ಕೃತಿ ತಳಹದಿಯ ಕೊಂಕಣಿ ಪುರಾತನ ಭಾಷೆ

ಸಂಸ್ಕೃತಿ ತಳಹದಿಯ ಕೊಂಕಣಿ ಪುರಾತನ ಭಾಷೆ

(ಸುದ್ದಿಕಿರಣ ವರದಿ)
ಶಿರ್ವ: ಕೊಂಕಣಿ ಭಾಷೆಗೆ ರಾಷ್ಟ್ರೀಯ ಭಾಷಾ ಮಾನ್ಯತೆ ಇರುವುದರಿಂದ ಆ ಭಾಷೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ. ಕೊಂಕಣಿ ಭಾಷೆಗೆ ಪುರಾತನ ಸಾಂಸ್ಕೃತಿಕ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿಯ ತಳಹದಿ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ ಸದಸ್ಯೆ ಪೂರ್ಣಿಮಾ ಸುರೇಶ್ ಹೇಳಿದರು.

ಶುಕ್ರವಾರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ರಾಜಾಪುರ ಸಾರಸ್ವತ ಯುವೃಂದ ಏರ್ಪಡಿಸಿದ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1992ರ ಆ. 20ರಂದು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಕೊಂಕಣಿ ಭಾಷೆ ಅಧಿಕೃತವಾಗಿ ದಾಖಲಾದ ದಿನ. ಅದು ಸಮಸ್ತ ಕೊಂಕಣಿ ಭಾಷಿಕರಿಗೆ ಹೆಮ್ಮೆಯ ದಿನ ಎಂದರು.

ಈ ಸಂದರ್ಭದಲ್ಲಿ ಕಳೆದ 43 ವರ್ಷದಿಂದ ಆರ್.ಎಸ್.ಬಿ ಕೊಂಕಣಿ ತ್ರೈಮಾಸಿಕ ಪತ್ರಿಕೆ ಸಾರಸ್ವತ್ ಸಂದೇಶ್ ಗೌರವ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಣಿಪಾಲ ಸಮೀಪದ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್ ಅವರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ್ ನೀಡಿ ಗೌರವಿಸಲಾಯಿತು.

ಅಭ್ಯಾಗತರಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ ಸದಸ್ಯ ಬಿ. ಪುಂಡಲೀಕ ಮರಾಠೆ ಮಾತನಾಡಿ, ಭಾರತದ ಪಶ್ಚಿಮ ಕರಾವಳಿಯ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಾಗೂ ಕರಾವಳಿ ಭಾಗದ ಹಿಂದೂ, ಮುಸ್ಲಿಮ್, ಕ್ರೈಸ್ತರಾದಿಯಾಗಿ 42 ಸಮುದಾಯದವರ ಮಾತೃಭಾಷೆ ಕೊಂಕಣಿಯಾಗಿದೆ. ಗೋವಾದ ರಾಜ್ಯಭಾಷೆಯಾಗಿಯೂ ಅದು ಮಾನ್ಯತೆ ಗಳಿಸಿದೆ.

ಈ ಭಾಷೆಯ ಸಂಸ್ಕೃತಿ, ಜಾನಪದ ಪರಂಪರೆ, ಇತಿಹಾಸ, ಸಾಧನೆಗಳ ಬೆಳವಣಿಗೆ ಹಾಗೂ ಸಂರಕ್ಷಣೆಗಾಗಿ ಕರ್ನಾಟಕ ಸರಕಾರ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿ.ವಿ.ಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಿ ಈ ಭಾಷೆಯ ಸರ್ವಾಂಗೀಣ ಬೆಳವಣಿಗೆಗೆ ವೇದಿಕೆ ರೂಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುವವೃಂದ ಗೌರವಾಧ್ಯಕ್ಷ ಹಾಗೂ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಆರ್. ಪಾಟ್ಕರ್, ಈ ದಿನವನ್ನು ಯುವವೃಂದದ ಮೂಲಕ ಪ್ರತೀ ವರ್ಷ ಆಚರಿಸಲಾಗುತ್ತಿದ್ದು, ಸಮಾಜದ ವಿವಿಧ ಪ್ರದೇಶಗಳಲ್ಲಿರುವ ಸಮಾಜದ ಸಂಘಟನೆಗಳೂ ಮಾನ್ಯತಾ ದಿನಾಚರಣೆ ಆಚರಿಸುವ ಮೂಲಕ ಮಾತೃಭಾಷೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ಶುಭ ಹಾರೈಸಿದರು.

ಯುವೃಂದ ಅಧ್ಯಕ್ಷೆ ಶ್ರಾವ್ಯಾ ಪಾಟ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಮಲತಾ ಪಾಟ್ಕರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀದುರ್ಗಾ ಮಹಿಳಾ ವೃಂದ ಅಧ್ಯಕ್ಷೆ ಶೋಭಾ ಪಾಟ್ಕರ್, ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಅಧ್ಯಕ್ಷೆ ಗೀತಾ ವಾಗ್ಲೆ, ಎಳ್ಳಾರೆ ಪಾಂಡುರಂಗ ಕಾಮತ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!