Tuesday, May 17, 2022
Home ಮನರಂಜನೆ ತುಳು ಭಾಷೆಗೆ ಮಾನ್ಯತೆ ದೊರಕಿಸಿಕೊಡಲು ಯತ್ನ

ತುಳು ಭಾಷೆಗೆ ಮಾನ್ಯತೆ ದೊರಕಿಸಿಕೊಡಲು ಯತ್ನ

ಉಡುಪಿ: ದ್ರಾವಿಡ ಭಾಷೆಗಳಲ್ಲೊಂದಾದ ಪುರಾತನ ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ದೊರಕಿಸಿಕೊಡುವಲ್ಲಿ ಯತ್ನಿಸುವುದಾಗಿ ಶಾಸಕ ರಘುಪತಿ ಭಟ್ ಹೇಳಿದರು.

ಕರ್ನಾಟಕ ತುಳು ಅಕಾಡೆಮಿ ಹಾಗೂ ಜೈ ತುಳುನಾಡು ಸಂಘಟನೆ ಆಶ್ರಯದಲ್ಲಿ ಸೋಮವಾರ ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಮಂದಾರ ತುಳು ಲಿಪಿ  ಬಿಡುಗಡೆಗೊಳಿಸಿ ಮಾತನಾಡಿದರು.

ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ತುಳು ಭಾಷೆ ಈ ಹಿಂದೆ ಅಷ್ಟಮಠಗಳ ಅಧಿಕೃತ ಭಾಷೆಯಾಗಿತ್ತು. ಮಲಯಾಳ ಲಿಪಿ ತುಳು ಎನ್ನಲಾಗುತ್ತಿದೆ. ತುಳು ಲಿಪಿಯಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಕೃತಿ ರಚನೆಯಾಗಿತ್ತು. ಆದರೆ, ಕಾಲದ ಓಘಕ್ಕೆ ಸಿಲುಕಿ ತುಳು ಬಡವಾಯಿತು. ಇದೀಗ ಮತ್ತೆ ಆ ಬಗ್ಗೆ ಆಸಕ್ತಿ ಮೂಡಿಬರುತ್ತಿರುವುದು ಸಂತೋಷದಾಯಕ ಎಂದರು.

ತಾನು ಈ ಹಿಂದೆ ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡಲು ಶಾಸಕರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾಗಿ ತಿಳಿಸಿದ ಭಟ್, ಆದರೆ ಭಾಷಾಂತರದ ಸಮಸ್ಯೆಯಿಂದಾಗಿ ಅದು ಈಡೇರಿಲ್ಲ. ಮುಂದಿನ ಅಧಿವೇಶನದಲ್ಲಿ ಆ ಬಗ್ಗೆ ಮತ್ತೆ ಧ್ವನಿಯೆತ್ತುವುದಾಗಿ ಭರವಸೆ ನೀಡಿದರು.

ತುಳು ಬಗ್ಗೆ ಯಾರಿಗೂ ವಿರೋಧವಿಲ್ಲ. ಕನ್ನಡ ಮತ್ತು ತುಳುವನ್ನು ಸಮಾನವಾಗಿ ಗೌರವಿಸಲಾಗುತ್ತಿದೆ. ತುಳು ಲಿಪಿ ಬಗ್ಗೆ ಜಾಗೃತಿ ಮೂಡಬೇಕು. ಶಾಲೆಗಳಲ್ಲಿ ಅದನ್ನು ಕಲಿಸುವಂತಾಗಬೇಕು ಎಂದು ಆಶಿಸಿದರು.

ತುಳು ಅಕಾಡೆಮಿ ಸದಸ್ಯರಾದ ಡಾ. ಆಕಾಶರಾಜ್ ಜೈನ್ ಮತ್ತು ತಾರಾ ಆಚಾರ್ಯ, ಜೈತುಳುನಾಡು ಸಂಘಟನೆ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಲಿಪಿ ಪರಿಷ್ಕರಿಸಿದ ಪ್ರಹ್ಲಾದ್ ಪಿ. ತಂತ್ರಿ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಮಂದಾರ ತುಳು ಲಿಪಿ ಪರಿಷ್ಕರಿಸಿದ ಪ್ರಹ್ಲಾದ ತಂತ್ರಿ ಅವರನ್ನು ಶಾಸಕ ಭಟ್ ಗೌರವಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!