ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಸನ್ಮಾನ
(ಸುದ್ದಿಕಿರಣ ವರದಿ)
ಉಡುಪಿ: ನಿಹಾಲ್ ತಾವ್ರೊ ಲಭಿಸಿದ ಅವಕಾಶ ಉಪಯೋಗಿಸಿಕೊಂಡು ಇಂಡಿಯನ್ ಐಡಲ್ ಫೈನಲ್ ಹಂತಕ್ಕೆ ತಲುಪುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಉಡುಪಿ ಬಿಷಪ್ ವಂ. ಡಾl ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೊ ಅವರಿಗೆ ಅಭಿನಂದಿಸಿ ಮಾತನಾಡಿದರು.
ನಿಹಾಲ್ ಏಕಾಏಕಿಯಾಗಿ ಈ ಹಂತಕ್ಕೆ ತಲುಪಿಲ್ಲ. ಬದಲಾಗಿ ತನಗೆ ಸಿಕ್ಕಿದ ಸಣ್ಣಪುಟ್ಟ ಅವಕಾಶ ಬಳಸಿಕೊಂಡು ಮುಂದುವರಿದು ಈ ಹಂತ ತಲುಪಿದ್ದಾರೆ.
ನಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳದೆ ಇದ್ದಾಗ ನಾವು ಮುಂದುವರಿಯಲು ಅಸಾಧ್ಯವಾಗುತ್ತದೆ. ಕೆಲವೊಮ್ಮೆ ನಾವು ಒಂದು ಹಂತಕ್ಕೆ ತಲುಪಿ ಅಲ್ಲಿಗೇ ನಿಲ್ಲುವುದು ಸಾಮಾನ್ಯ. ಆದರೆ, ನಿಹಾಲ್ ಪ್ರತೀ ಬಾರಿ ಒಂದು ಹಂತ ತಲುಪಿದಾಗ ಮುಂದೆ ಇರುವ ಉನ್ನತ ಹಂತ ಯಾವುದು ಎನ್ನುವುದನ್ನು ಅರಿತು ಮುಂದುವರಿದಾಗ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಯಿತು. ಕಠಿಣ ಪರಿಶ್ರಮದಿಂದ ಮನುಷ್ಯನಿಗೆ ಸ್ಥಾನ ಲಭಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ನಿಹಾಲ್ ತಾವ್ರೊ, ನಾನು ಸಂಗೀತದ ಯಾತ್ರೆ ಆರಂಭಿಸಿದ್ದು ಚರ್ಚ್ ಹಂತದಿಂದ. ಚರ್ಚಿನ ಗಾಯನ ಪಂಗಡದಲ್ಲಿ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಮುಂದುವರಿದು ಇಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಮನುಷ್ಯನಿಗೆ ಅವಕಾಶಗಳು ಲಭಿಸುತ್ತವೆ. ಆದರೆ, ಅದನ್ನು ಬಳಸಿಕೊಳ್ಳಬೇಕು. ಆ ಮೂಲಕ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ನಾನು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ನನ್ನನ್ನು ಪ್ರತಿಯೊಬ್ಬರೂ ಬೆಂಬಲಿಸಿದ್ದರ ಪರಿಣಾಮ ಇಂದು ನನಗೆ ಈ ಹಂತದಲ್ಲಿ ಗೌರವ ಲಭಿಸಲು ಸಾಧ್ಯವಾಗಿದೆ ಎಂದರು.
ಇದೇ ವೇಳೆ ಧರ್ಮಪ್ರಾಂತ್ಯದ ವಿವಿಧ ಸಂಘಟನೆಗಳು, ಧರ್ಮಗುರುಗಳು ನಿಹಾಲ್ ಅವರನ್ನು ಗೌರವಿಸಿದರು.
ವೇದಿಕೆಯಲ್ಲಿ ನಿಹಾಲ್ ಅವರ ತಂದೆ ಹೆರಾಲ್ಡ್ ತಾವ್ರೊ, ತಾಯಿ ಪ್ರೆಸಿಲ್ಲಾ ತಾವ್ರೊ, ಸಹೋದರ ನಿಶಾನ್ ತಾವ್ರೊ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ನಿವೃತ್ತ ಧರ್ಮಗುರು ವಂ| ವಿಲಿಯಂ ಮಾರ್ಟಿಸ್ ಇದ್ದರು.
ಉಡುಪಿ ಶೋಕಮಾತಾ ಇಗರ್ಜಿ ಧರ್ಮಗುರು ವಂ| ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿ, ವಂದಿಸಿದರು.