ಮಾತು- ಮೌನ
ಮರೆಯಾದ ಕಾಲದಲಿ ನಾನೆಂದರೆ ಮಾತು,
ಬೆಳಕು ಹರಿದು ಬೆಳಗಾದರೂ, ಕತ್ತಲು ಮೂಡಿ ಇರುಳಾದರೂ,
ಹೊತ್ತಿಲ್ಲ-ಗೊತ್ತಿಲ್ಲ, ಪೋಣಿಸಿ ಮುಗಿಯದ ಮಾಲೆ ಮಾತು!
ಮಾತು ಬೆಳ್ಳಿಯಂತೆ, ಮೌನ ಬಂಗಾರವಂತೆ,
ನನಗಂತೂ ಇಲ್ಲ ಬಂಗಾರದ ಚಿಂತೆ!
ಮರದ ಬಾಯಾಗಿದ್ದರೆ ಒಡೆದು ಚೆಲ್ಲಾಪಿಲ್ಲಿ,
ಹಾಗೆಂದು ಹೆದರಿಸುವ ಗೆಳತಿ, ಮಾತಿಗೆ ಬಾ ಇಲ್ಲಿ.
ಮಾತೇ ಮಂತ್ರ, ಮಾತಿನಿಂದಲೇ ತಂತ್ರ,
ನನ್ನ ಮಾತಿಗೆ ಮರುಳಾಗದವರೆಲ್ಲಿ?
ಹೇಳಿದ್ದು ಅತಿಯಾಗಿ, ಕೇಳಿದ್ದು ಮಿತಿಯಾಗಿ,
ದಿನಗಳುರುಳಿ ಸಾಗಿ, ಗತಕಾಲ ಸಾಗಿ,
ಹೊಸಕಾಲವಿದು ಸುಗ್ಗಿ.
ನನ್ನನ್ನು ಆವರಿಸಿದ ನೀನೋ ಮಹಾ ಮೌನಿ,
ಆದರೂ ಅದೆಲ್ಲೋ ಕೇಳುತಿದೆ ಸರಿಗಮಪದನಿ…
ಮನ ಮೂಗ್ಗು ಹೂವಾಗಿ, ಹೃದಯ ಪಲ್ಲವಿಯಾಗಿ,
ನಿನ್ನ ಸಂದೇಶವು ನನ್ನ ಭ್ರಮಿಸಿತು, ಮನವು ಮೌನದಿ ಸಂಭ್ರಮಿಸಿತು,
ಮಾತೀಗ ಮೌನವಾಯಿತು, ಮೌನ ಸಂಗೀತವಾಯಿತು,
ಹಿತವೆನಿಸುವ ನಿನ್ನ ಮೌನ, ಜೀವನಕೆ ಕವನವಾಯಿತು.
ಈಗೀಗ ನಾನೂ ನಿನ್ನಂತೆ ಮೌನಕ್ಕೆ ಶರಣ
ರಚನೆ-
ಡಾ.ಚೈತ್ರಾ ಹೆಬ್ಬಾರ್, ಉಡುಪಿ