Wednesday, August 10, 2022
Home ಮನರಂಜನೆ ರಂಗ ತರಬೇತಿ ಕಾರ್ಯಾಗಾರ

ರಂಗ ತರಬೇತಿ ಕಾರ್ಯಾಗಾರ

ರಂಗ ತರಬೇತಿ ಕಾರ್ಯಾಗಾರ
(ಸುದ್ದಿಕಿರಣ ವರದಿ)

ಉಡುಪಿ: ಇಲ್ಲಿನ ರಂಗಭೂಮಿ ಉಡುಪಿ ಆಶ್ರಯದಲ್ಲಿ ರಂಗಾಸಕ್ತರಿಗಾಗಿ ಆಯೋಜಿಸಿದ್ದ ಎರಡು ದಿನಗಳವಧಿಯ ವಿವಿಧ ರಂಗ ತರಬೇತಿ ಸರಣಿ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಎಂ.ಜಿ.ಎಂ. ಕಾಲೇಜು ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಮಿ ತೆಳ್ಳಾರು ರವೀಂದ್ರ ಪೂಜಾರಿ ಉದ್ಘಾಟಿಸಿ, ಕೊರೊನಾದಿಂದಾಗಿ ಸ್ಥಗಿತಗೊಂಡ ರಂಗ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡುವ ಕಾರ್ಯ ಶ್ಲಾಘನೀಯ ಎಂದರು.

ಅಭ್ಯಾಗತರಾಗಿದ್ದ ಶಾಸಕ ರಘುಪತಿ ಭಟ್, ಉಡುಪಿ ಜನತೆಯ ಸಾಂಸ್ಕೃತಿಕ ಆಸಕ್ತಿ ಹಾಗೂ ರಂಗಭೂಮಿ ಬಗೆಗಿನ ಕಾಳಜಿ ಪ್ರಶಂಸನೀಯ. ಸತತ ತೊಡಗಿಸಿಕೊಳ್ಳುವಿಕೆಯಿಂದ ಶ್ರೇಷ್ಠ ಕಲಾವಿದನಾಗುವುದು ಸಾಧ್ಯ ಎಂದರು.

ಇನ್ನೋರ್ವ ಅತಿಥಿ ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ನಾಯಕ್, ರಂಗಭೂಮಿಯ ಕಲಾಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಣಿಗ ಹೆಸರಲ್ಲಿ ರಂಗಮಂದಿರ
ಕಾರ್ಯಕ್ರಮದ ಮಾರ್ಗದರ್ಶಕ ಮಂಡ್ಯ ರಮೇಶ್, ಉಡುಪಿಯಲ್ಲಿ ಸುಸಜ್ಜಿತ ಜಿಲ್ಲಾ ರಂಗ ಮಂದಿರ ಆಗಬೇಕು. ಕಲೆ ಹಾಗೂ ರಂಗಭೂಮಿಗಾಗಿ ತನ್ನ ಇಡೀ ಜೀವನವನ್ನೇ ಧಾರೆ ಎರೆದ ರಂಗ ನೇತಾರ ಆನಂದ ಗಾಣಿಗ ಹೆಸರನ್ನು ಆ ರಂಗ ಮಂಟಪಕ್ಕೆ ಇಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ರಘುಪತಿ ಭಟ್ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ರಂಗ ತರಬೇತಿಗೂ ನೀಡಬೇಕು ಎಂದು ಮನವಿ ಮಾಡಿದರು.

ಸಂಸ್ಥೆ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ರಂಗಭೂಮಿಯ ಕಾರ್ಯವೈಖರಿ ಬಗ್ಗೆ ವಿವರಿಸಿದರು. ಚಲನಚಿತ್ರ ನಟ, ರಂಗ ಕರ್ಮಿ ರಂಗ ಕಲ್ಯಾಣಿ ಬಿರುದಾಂಕಿತ ಮಂಡ್ಯ ರಮೇಶ್ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಪ್ರಸ್ತುತ ತರಬೇತಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ರಾಜ್ಯದ ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ ನಿರಂತರವಾಗಿ ನಡೆಸಲುದ್ದೇಶಿಸಲಾಗಿದೆ ಎಂದರು.

ಸಂಸ್ಥೆ ಉಪಾಧ್ಯಕ್ಷ ನಂದಕುಮಾರ್ ಸ್ವಾಗತಿಸಿದರು. ಇನ್ನೋರ್ವ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಇದ್ದರು. ಕಾರ್ಯಕ್ರಮ ನಿರ್ದೇಶಕ ವಿವೇಕಾನಂದ ಪಾಂಗಣ್ಣಾಯ ವಂದಿಸಿದರು.

ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಹಾಗೂ ಉಡುಪಿಯ ಸುಮಾರು 50 ಮಂದಿ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದು, ಮಂಡ್ಯ ರಮೇಶ್ ಜೊತೆಗೆ ದೂರದರ್ಶನ ಕಲಾವಿದ ರಂಗನಟ ಶಿಶಿರ್ ಸಹಕರಿಸುತ್ತಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!