ಸುದ್ದಿಕಿರಣ ವರದಿ
ಬುಧವಾರ, ಜುಲೈ 13
ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣಗಳ ಭೇಟಿ
ಉಡುಪಿ: ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕೆಎಂಸಿ ಎಲುಬು ಮತ್ತು ಮೂಳೆ ವಿಭಾಗ ಪ್ರಾಧ್ಯಾಪಕ ಹಾಗೂ ವೈದ್ಯ ಡಾ. ಪ್ರೊ. ಕಿರಣ್ ಆಚಾರ್ಯ ಹೇಳಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಣಿಪಾಲ್ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರವಂತೆ ನಾಗರಾಜ್ ಹೆಬ್ಬಾರ್ ವಿರಚಿತ ಪ್ರವಾಸ ಕಥನ ಚಾರ್ ಧಾಮ್ ಯಾತ್ರಾ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಆ ವಿವರಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಪ್ರವಾಸಾಸಕ್ತರಿಗೆ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಟ್ಟಿರುವ ನಾಗರಾಜ್ ಹೆಬ್ಬಾರ್ ಕಾರ್ಯ ಪ್ರಶಂಸನೀಯ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಲಕ್ಷ್ಮೀನಾರಾಯಣ ಕೃತಿ ಪರಿಚಯ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರಾವಳಿ ಪ್ರವಾಸ ಉದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊಫೆಸರ್ ಶಂಕರ್, ಉಡುಪಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್. ಪಿ. ಅಭ್ಯಾಗತರಾಗಿದ್ದರು.
ಲೇಖಕ, ಕಲಾವಿದ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ನಿರೂಪಿಸಿದರು. ಕೃತಿಕಾರ ನಾಗರಾಜ ಹೆಬ್ಬಾರ್ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.