ಸುದ್ದಿಕಿರಣ ವರದಿ
ಭಾನುವಾರ, ಜನವರಿ 6
ಒಳಮನದ ಪ್ರಕಟವೇ ಸಾಹಿತ್ಯ
ಉಡುಪಿ: ಪ್ರತಿಯೊಬ್ಬರಲ್ಲೂ ಒಳಮನಸ್ಸು ಮಾತನಾಡಬೇಕು. ಇಲ್ಲದಿದ್ದರೆ ವ್ಯಕ್ತಿ ಪೂರ್ಣಗೊಳ್ಳುವುದು ಅಸಾಧ್ಯ. ಒಳಮನಸ್ಸು ಪ್ರಕಟಗೊಳ್ಳುವ ಪ್ರಕ್ರಿಯೆಯೇ ಸಾಹಿತ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಭಾನುವಾರ ಇಲ್ಲಿನ ಎಂಜಿಎಂ ಕಾಲೇಜಿನ ಗೀತಾಂಜಲಿ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಮೋಘ ಹಿರಿಯಡಕ, ಯು ಚಾನೆಲ್ ಮತ್ತು ವಿಕಾಸ ಪ್ರಕಾಶನ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಪೂರ್ಣಿಮಾ ಸುರೇಶ್ ಅವರ ಮಧ್ಯಮಾವತಿ ಕವನ ಸಂಕಲನ ಅನಾವರಣಗೊಳಿಸಿ ಮಾತನಾಡಿದರು.
ಮನಸ್ಸಿನ ನೋವು, ನಲಿವು, ವೇದನೆ, ಭಾವನೆ ಪ್ರಕಟಿಸಲು ಕವಿತೆ ಉತ್ತಮ ಮಾಧ್ಯಮ ಎಂದರು.
ಕರ್ನಾಟಕ ಜನಪದ ವಿ.ವಿ. ವಿಶ್ರಾಂತ ಕುಲಪತಿ ಡಾ| ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಪೂರ್ಣಪ್ರಜ್ಞ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಕವಿ- ಕಾವ್ಯ ಕುರಿತು ಮಾತನಾಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ| ರಾಜಶೇಖರ ಹಳೆಮನೆ ಕೃತಿ ಪರಿಚಯ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಅಮೋಘ ನಿರ್ದೇಶಕ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘನಾ ನಿರೂಪಿಸಿದರು.
ಲೇಖಕಿ ಪೂರ್ಣಿಮಾ ಸುರೇಶ್ ವಂದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪಾರ್ವತಿ ಐತಾಳ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಬೆಂಗಳೂರು ರಮೇಶ್ಚಂದ್ರ ಮತ್ತು ತಂಡದವರಿಂದ ಸುಗಮ ಸಂಗೀತ ನಡೆಯಿತು