Friday, January 28, 2022
Home ಮನರಂಜನೆ ಇನಾಯತ್ ಆರ್ಟ್ ಗ್ಯಾಲರಿಗೆ ಬೆಳ್ಳಿಹಬ್ಬದ ಸಡಗರ

ಇನಾಯತ್ ಆರ್ಟ್ ಗ್ಯಾಲರಿಗೆ ಬೆಳ್ಳಿಹಬ್ಬದ ಸಡಗರ

ಇನಾಯತ್ ಆರ್ಟ್ ಗ್ಯಾಲರಿಗೆ ಬೆಳ್ಳಿಹಬ್ಬದ ಸಡಗರ
(ಸುದ್ದಿಕಿರಣ ವರದಿ)

ಉಡುಪಿ: ಇಲ್ಲಿನ ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿ ಬೆಳ್ಳಿಹಬ್ಬದ ಸಡಗರದಲ್ಲಿದ್ದು, ಅ. 2ರಂದು ನವೀಕೃತ ಗ್ಯಾಲರಿಯ ಉದ್ಘಾಟನೆ ನಡೆಯಲಿದೆ ಎಂದು ಕಲಾವಿದ ಲಿಯಾಖತ್ ಅಲಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಲಾಪ್ರಪಂಚಕ್ಕೆ ಕೊಡುಗೆಯಾಗಿ ತಂದೆಯವರ ನೆನಪಿಗಾಗಿ ಇನಾಯತ್ ಆರ್ಟ್ ಗ್ಯಾಲರಿಯನ್ನು ಕಳೆದ 25 ವರ್ಷದ ಹಿಂದೆ ರೂಪಿಸಿ, ಅನೇಕ ಕಲಾಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ ಮೂಲಕ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತಿದೆ ಎಂದರು.

ಬೆಳ್ಳಿ ಹಬ್ಬದ ಸುಸಂದರ್ಭದಲ್ಲಿ ನವೀಕೃತ, ವಿಶಾಲ ಗ್ಯಾಲರಿಯನ್ನು ರೂಪಿಸಲಾಗಿದ್ದು, ಹೆಸರಾಂತ ಕಲಾವಿದರ ಕಲಾಪ್ರದರ್ಶನಕ್ಕೆ ಪೂರಕವಾಗಲಿದೆ ಎಂದರು.

ನೋವು ನುಂಗಿ ನಗುವ ಕಲಾವಿದ
ಸ್ವತಃ ಪೋಲಿಯೊ ಪೀಡಿತರಾಗಿದ್ದರೂ, ತನ್ನ ದೈಹಿಕ ವಿಕಲತೆಯನ್ನು ಮರೆತು ಕಲೆಗಾಗಿ ಜೀವನವನ್ನು ಮುಡಿಪಾಗಿಟ್ಟು, ಆ ಮೂಲಕ ಇತರರನ್ನು ಖಷಿಪಡಿಸುವ ಮೂಲಕ ಸಂತೃಪ್ತತೆಯನ್ನು ಕಾಣುವ ಕಲಾವಿದ ಲಿಯಾಖತ್, ತನ್ನ ಕಲಾಭಿರುಚಿ ಸಮಾಜಕ್ಕೆ ಸಮರ್ಪಣೆಯಾಗಬೇಕೆಂಬ ದೃಢ ನಿಶ್ಚಯದೊಂದಿಗೆ ಕಲಾಶಾಲೆ, ಕಲಾ ಪ್ರದರ್ಶನ, ಕಲಾಸ್ಪರ್ಧೆ ಹೆಸರಾಂತ ಕಲಾವಿದರ ಕಲಾಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಕಲಾವಿದ ಸಕು ಪಾಂಗಾಳ ತಿಳಿಸಿದರು.

ಜಾತ್ಯತೀತತೆಗೆ ಕೊಡುಗೆ
ಸಿಂಡಿಕೇಟ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದು, ಇದೀಗ ನಿವೃತ್ತರಾದ ಲಿಯಾಖತ್, ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜಾತ್ಯತಿತತೆಗೆ ಮೆರಗು ಎಂಬಂತೆ ಹಿಂದು ಧರ್ಮದ ಅನೇಕ ದೇವ- ದೇವತೆಗಳ ಚಿತ್ರಗಳನ್ನೂ ಬಿಡಿಸಿ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ ಎಂದರು.

ಅ. 2ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ರಜತ ಮಹೋತ್ಸವ ನಡೆಯಲಿದ್ದು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸುವರು. ಶಾಸಕ ರಘುಪತಿ ಭಟ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಭ್ಯಾಗತರಾಗಿ ಭಾಗವಹಿಸುವರು.

ವಿವಿಧ ಮಾಧ್ಯಮಗಳಿಂದ ರಚಿಸಲ್ಪಟ್ಟ ವಿವಿಧ ಕಲಾವಿದರ ಕಲಾಕೃತಿಗಳು ಅ. 2ರಿಂದ 4ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ ಎಂದು ಲಿಯಾಖತ್ ಅಲಿ ತಿಳಿಸಿದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ನರಸಿಂಹಮೂರ್ತಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!