Wednesday, August 10, 2022
Home ಮನರಂಜನೆ ಇನಾಂದಾರ್ ಪ್ರಶಸ್ತಿಗೆ ಆಯ್ಕೆ

ಇನಾಂದಾರ್ ಪ್ರಶಸ್ತಿಗೆ ಆಯ್ಕೆ

ಇನಾಂದಾರ್ ಪ್ರಶಸ್ತಿಗೆ ಆಯ್ಕೆ
(ಸುದ್ದಿಕಿರಣ ವರದಿ)

ಉಡುಪಿ: ಖ್ಯಾತ ವಿಮರ್ಶಕ ಪ್ರೊ. ವಿ. ಎಂ. ಇನಾಂದಾರ್ ನೆನಪಿನಲ್ಲಿ ನೀಡುವ ಇನಾಂದಾರ್ ಪ್ರಶಸ್ತಿಗೆ ಹಿರಿಯ ಲೇಖಕ, ಸಾಹಿತಿ, ಕಾದಂಬರಿಕಾರ ಕೆ. ಸತ್ಯನಾರಾಯಣ ಅವರ ಚಿನ್ನಮ್ಮನ ಲಗ್ನ 1893 ಪುಸ್ತಕ 2020ರ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಕೆ. ಸತ್ಯನಾರಾಯಣ ಅವರು ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಸಂಪಾದನೆ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮವುಳ್ಳವರು. ನಿಮ್ಮ ಮೊದಲ ಪ್ರೇಮದ ಕಥೆ, ನಕ್ಸಲ್ ವರಸೆ, ಹೆಗ್ಗುರುತು, ದಲಿತರ ನಮ್ಮ ಕಥೆಗಳು, ಚಿತ್ರಗುಪ್ತನ ಕಥೆಗಳು (ಸಣ್ಣಕತೆಗಳು) ನಮ್ಮ ಪ್ರೀತಿಯ ಕ್ರಿಕೆಟ್, ದಾಂಪತ್ಯಕ್ಕೊಂದು ಶೀಲ, ಲೋಕ ಪ್ರಬಂಧ (ಪ್ರಬಂಧಗಳು) ಗೌರಿ, ಸನ್ನಿಧಾನ, ಕಾಲಜಿಂಕೆ, ವಿಕಲ್ಪ (ಕಾದಂಬರಿಗಳು), ಆಸಕ್ತಿ, ಮನೋಧರ್ಮ, ಖಾಸಗಿ ವಿಮರ್ಶೆ, ಮರುಕಳಿಸಿದ ಮಾರ್ದವತೆ, ಕಾರಂತರ ಕಾದಂಬರಿಗಳಲ್ಲಿ ದುಡಿಮೆ, ಮಹಾಕಥನದ ಮಾಸ್ತಿ, ಅವರವರ ಭವಕ್ಕೆ ಮುಂತಾದ ವಿಮರ್ಶಾ ಕೃತಿಗಳನ್ನೂ ರಚಿಸಿದ್ದಾರೆ.

ಅವರ ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಮಾಸ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್, ವಿಶ್ವಚೇತನ ಪ್ರಶಸ್ತಿ, ಭಾರತೀಸುತ ದತ್ತಿ ನಿಧಿ ಪ್ರಶಸ್ತಿ ಲಭಿಸಿವೆ.
1954ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ಜನಿಸಿದ ಕೆ. ಸತ್ಯನಾರಾಯಣ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ಸುಮಾರು 36 ವರ್ಷ ಕಾಲ ಸೇವೆ ಸಲ್ಲಿಸಿ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!