Friday, January 28, 2022
Home ಮನರಂಜನೆ ಅಂಚೆಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿ ಅನಾವರಣ

ಅಂಚೆಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿ ಅನಾವರಣ

ಅಂಚೆಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿ ಅನಾವರಣ
(ಸುದ್ದಿಕಿರಣ ವರದಿ)

ಉಡುಪಿ: ಸಾಧಿಸುವ ಮನಸ್ಸಿದ್ದರೆ ಸಾಧನೆಯ ಹಾದಿ ತಂತಾನೇ ಗೋಚರವಾಗುತ್ತದೆ. ಅಂಚೆಚೀಟಿಯಂಥ ವಿಷಯಗಳಿಂದಲೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಅಂಚೆಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿಯೇ ಸಾಕ್ಷಿ ಎಂದು ಉಡುಪಿ ಅಂಚೆ ಅಧೀಕ್ಷಕ ನವೀನ್ ಚಂದರ್ ಹೇಳಿದರು.

ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ, ಕೊಡವೂರು ಬ್ರಾಹ್ಮಣ ಮಹಾಸಭಾ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹ ಸಂದರ್ಭ ಪ್ರಯುಕ್ತ ಫಿಲಾಟಲಿ ದಿನ ಅಂಗವಾಗಿ ಕೊಡವೂರು ಭಾಮಾ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಸಂಪಾದಿತ, ತನ್ನ ಸಂಗ್ರಹದ ಅಂಚೆಚೀಟಿಗಳಿಗೆ ಕನ್ನಡ, ತುಳು ಹಾಗೂ ಆಂಗ್ಲ ಅಕ್ಷರ ಮಾಲೆಯನ್ನೊಳಗೊಂಡ ತುಳು ಲಿಪಿ ಸಹಿತ ಅಂಚೆಚೀಟಿಗಳಿಗೆ ತ್ರಿಭಾಷಾ ತೋರಣ ಕೃತಿ ಅನಾವರಣಗೊಳಿಸಿ ಮಾತನಾಡಿದರು.

ಸೃಜನಶೀಲ ಕಾರ್ಯ
ಅಗಾಧತೆಯ ಆಗರವಾಗಿರುವ ಅಂಚೆಚೀಟಿ ಸಂಗ್ರಹ ಹವ್ಯಾಸವನ್ನು ತ್ರಿಭಾಷೆಗಳಿಗೆ ಅಳವಡಿಸಿ ಅದಕ್ಕೆ ತುಳುಲಿಪಿಯನ್ನೂ ಪೋಣಿಸಿದ ಸೃಜನಶೀಲ ಕಾರ್ಯ ಶ್ಲಾಘನೀಯ. ಇಂಥ ಹವ್ಯಾಸವನ್ನು ಯುವ ಜನತೆ ಬೆಳೆಸಿಕೊಳ್ಳಬೇಕು ಎಂದು ಆಶಿಸಿದರು.

ಅಂಚೆಚೀಟಿ ಪ್ರದರ್ಶನ
ತ್ರಿಭಾಷಾ ಅಂಚೆಚೀಟಿ ಹಾಗು ಇತರ ಅಂಚೆಚೀಟಿ ಪ್ರದರ್ಶನವನ್ನು ಹಿರಿಯ ಫಿಲಾಟಲಿಸ್ಟ್ ಎಂ. ಕೃಷ್ಣಯ್ಯರವರು ಉದ್ಘಾಟಿಸಿದರು. ಇಂಥ ಅಪೂರ್ವ ಗ್ಯಾಲರಿ, ಗ್ಯಾಲರಿಯಲ್ಲಿ ಕ್ರಮಬದ್ಧವಾಗಿ, ಸುಸಜ್ಜಿತವಾಗಿ ಒಪ್ಪವಾಗಿ ಜೋಡಿಸಿದ ಅಂಚೆಚೀಟಿಗಳ ವೀಕ್ಷಣೆಯಿಂದ ಹತ್ತು ಹಲವು ಸಾಂಸ್ಕೃತಿಕ, ಸಾಹಿತ್ಯಿಕ ವಿಶೇಷತೆಗಳ ಅರಿವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಖ್ಯಾತ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಾಹಕ ಬೈಕಾಡಿ ಶ್ರೀನಿವಾಸ ರಾವ್ ಅವರನ್ನು ಫಿಲಾಟಲಿ ದಿನ ಅಂಗವಾಗಿ ಅಭಿನಂದಿಸಲಾಯಿತು.

ಕೊಡವೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾರಾಯಣ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ಅಭ್ಯಾಗತರಾಗಿ ಕೊಡವೂರು ಬ್ರಾಹ್ಮಣ ಮಹಾಸಭಾ ರಜತ ಮಹೋತ್ಸವ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಸಹಾಯಕ ಅಂಚೆ ಅಧೀಕ್ಷಕ ನವೀನ್ ವಿ. ಎಲ್., ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಕೊಡಂಕೂರು ಆಗಮಿಸಿದ್ದರು.

ಉಡುಪಿ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಪ್ರಸ್ತಾವನೆಗೈದರು. ಕೃತಿ ಸಂಪಾದಕಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಉಡುಪ ರತ್ನ ಪ್ರತಿಷ್ಠಾನ ಸಂಚಾಲಕ ಜನಾರ್ದನ ಕೊಡವೂರು ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!