Monday, July 4, 2022
Home ಮನರಂಜನೆ ಹಿಂದಿ ಭಾಷೆಯಲ್ಲಿ `ಚಕ್ರವ್ಯೂಹ' ಯಕ್ಷಗಾನ ಪ್ರದರ್ಶನ

ಹಿಂದಿ ಭಾಷೆಯಲ್ಲಿ `ಚಕ್ರವ್ಯೂಹ’ ಯಕ್ಷಗಾನ ಪ್ರದರ್ಶನ

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಹಿಂದಿ ಭಾಷೆಯಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ
ಉಡುಪಿ: ಇಲ್ಲಿನ ಯಕ್ಷಗಾನ ಕಲಾಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಉಡುಪಿಯಲ್ಲಿ ಮೊದಲ ಬಾರಿಗೆ ಬಡಗುತಿಟ್ಟಿನಲ್ಲಿ ಹಿಂದಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಪ್ರಸಿದ್ಧ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಜನ್ಮದಿನ ಅಂಗವಾಗಿ ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್ ಆಶ್ರಯದಲ್ಲಿ ಜೂನ್ 15ರಂದು ಸಂಜೆ 6ಗಂಟೆಗೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟಿಯ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರಸಂಗ ಏರ್ಪಡಿಸಲಾಗಿದೆ.

ದೆಹಲಿ, ಪೂನಾ ಸೇರಿದಂತೆ ದೇಶದ ಹಲವೆಡೆ ಈಗಾಗಲೇ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದಿವೆ.

ಉಡುಪಿಯಲ್ಲಿಯೂ ತೆಂಕುತಿಟ್ಟಿನಲ್ಲಿ ಹಿಂದಿ ಯಕ್ಷಗಾನ ಪ್ರದರ್ಶನವಾಗಿದೆ. ಆದರೆ, ಬಡಗುತಿಟ್ಟಿನಲ್ಲಿ ಇದು ಮೊದಲ ಪ್ರಯೋಗ ಎಂದು ಗುರು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದರು.

ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಡಾ| ಮಾಧವಿ ಭಂಡಾರಿ ಕನ್ನಡದ ಪ್ರಸಂಗವನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಕರಾವಳಿಯ ಯಕ್ಷಗಾನ ಕಲೆ ಭಾಷೆಗಳ ಗಡಿ ಮೀರಿ ಬೆಳೆಯಬೇಕಾದರೆ ಪ್ರಯೋಗಗಳು ಅತ್ಯಗತ್ಯ. ಕಲಾಸಕ್ತರ ಮಾತೃಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜನೆಯಿಂದ ಯಕ್ಷಗಾನ ಕಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಬನ್ನಂಜೆ ತಿಳಿಸಿದರು.

ಪ್ರಸಿದ್ಧ ಕಲಾವಿದರಾದ ಸಿ.ಆರ್. ಜಂಭೆ ಈಗಾಗಲೇ ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದಾರೆ. ಉಡುಪಿಯಲ್ಲಿ ಹಿಂದಿ ಯಕ್ಷಗಾನ ಪ್ರಯೋಗ ನಡೆಸುವ ಹಿಂದೆ ಅವರ ಪ್ರೇರಣೆಯೂ ಇದೆ ಎಂದು ಸಂಜೀವ ಸುವರ್ಣ ತಿಳಿಸಿದರು.

ದಶಕಗಳ ಹಿಂದೆಯೇ ಅನ್ಯಭಾಷೆಯ ಕಲಾಸಕ್ತರಿಗೂ ಯಕ್ಷಗಾನ ತಲುಪಬೇಕು ಎಂಬ ಆಶಯದಿಂದ ಡಾ| ಶಿವರಾಮ ಕಾರಂತರು ಯಕ್ಷಗಾನದ ಸ್ವರೂಪ ಬದಲಿಸಿ, ಮಾತಿಗೆ ಬದಲಾಗಿ ಬ್ಯಾಲೆಯ ರೂಪದಲ್ಲಿ ಪ್ರದರ್ಶಿಸಿದ್ದರು. ಪ್ರಸ್ತುತ ಯಕ್ಷಗಾನ ಕಲಾಕೇಂದ್ರ ಸಂಪ್ರಯದಾಯ ಬದ್ಧ ಹಾಗೂ ಭಾವಪ್ರಧಾನವಾಗಿ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶಿಸುತ್ತಿದೆ ಎಂದು ಸಂಜೀವ ಸುವರ್ಣ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!