ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆ ರಕ್ತನಿಧಿ ಆಶ್ರಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಓ) ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಸರಣಿ ವೆಬಿನಾರ್ ಕಳೆದ ಮೂರು ದಿನಗಳವಧಿಯಲ್ಲಿ ನಡೆಯಿತು.
ಕಳೆದ 27ರಿಂದ ಆರಂಭವಾದ ಸರಣಿ ವೆಬಿನಾರ್ ಶುಕ್ರವಾರ ಸಂಪನ್ನಗೊಂಡಿತು. ಬಾಂಗ್ಲಾದೇಶ, ಇಂಡೋನೇಷ್ಯಾ, ಮಾಲ್ಡೀವ್ಸ್, ನೇಪಾಳ ದೇಶಗಳಲ್ಲಿ ರಕ್ತ ವರ್ಗಾವಣೆ ಸೇವೆಗಳಲ್ಲಿ ತೊಡಗಿರುವ ಆರೋಗ್ಯ ರಕ್ಷಣೆ ನೀಡುವವರಿಗೆ ಗುಣಮಟ್ಟದ ಮಾಹಿತಿ ನೀಡುವ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೆಬಿನಾರ್ ಗೆ ಚಾಲನೆ ನೀಡಿದ ಡಬ್ಲ್ಯೂ.ಎಚ್.ಓ ಪ್ರಾದೇಶಿಕ ಸಲಹೆಗಾರ್ತಿ ಡಾ. ಅಪರ್ಣ ಸಿಂಗ್ ಶಾ, ರಕ್ತ ವರ್ಗಾವಣೆ ಸಂದರ್ಭದಲ್ಲಿ ಹರಡುವ ಸೋಂಕುಗಳ ಪರೀಕ್ಷೆಯ ಗುಣಮಟ್ಟ ಹೆಚ್ಚಿಸಲು ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಪ್ರಸ್ತುತ ಸನ್ನಿವೇಶದಲ್ಲಿಯೂ ಆರೋಗ್ಯ ವೃತ್ತಿಪರರಾಗಿ ಹೊಸ ಮಾಹಿತಿ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳೊಂದಿಗೆ ಜ್ಞಾನದ ಮಟ್ಟ ವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವುದು ಹರ್ಷದಾಯಕ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಕ್ತನಿಧಿ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ, ರಕ್ತದ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು, ದಾನಿಗಳಿಂದ ರಕ್ತ ಸಂಗ್ರಹದಿಂದ ತೊಡಗಿ ರೋಗಿಗೆ ರಕ್ತ ವರ್ಗಾವಣೆಯಾಗುವ ವರೆಗಿನ ಎಲ್ಲ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಾಕಷ್ಟು ಕಾಳಜಿ ಮತ್ತು ಮುನ್ನೆಚ್ಚರಿಕೆ ವಹಿಸಬೇಕು. ಪ್ರಮುಖವಾಗಿ ರಕ್ತ ವರ್ಗಾವಣೆ ಸಂದರ್ಭದಲ್ಲಿ ಹರಡುವ ಸೋಂಕುಗಳ ತಪಾಸಣೆ ಅತಿ ಮುಖ್ಯ ಎಂದರು.
ಸೀರ್ ದೇಶಗಳ ಒಟ್ಟು 191 ರಕ್ತನಿಧಿ ಅಧಿಕಾರಿಗಳು ಮತ್ತು ತಂತ್ರಜ್ಞರು ಭಾಗವಹಿಸಿದ್ದರು. ವಿಶ್ವದಾದ್ಯಂತದ 38 ಮಂದಿ ಸಂಪನ್ಮೂಲವ್ಯಕ್ತಿಗಳು ಉಪನ್ಯಾಸ ನೀಡಿದರು.
ವಬಿನಾರ್ ನ್ನು ಯಶಸ್ವಿಯಾಗಿ ಸಂಘಟಿಸಿದ ಕೆಎಂಸಿ ಆಸ್ಪತ್ರೆ ರಕ್ತನಿಧಿ ತಂಡವನ್ನು ಆಸ್ಪತ್ರೆ ಸಿಇಓ ಸಿ. ಜಿ. ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿನಂದಿಸಿದರು