ಉಡುಪಿ: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಅಂಗವಾಗಿ ರಾಜ್ಯಾದ್ಯಂತ ಡಿ. 25ರಂದು ಅಟಲ್ ಸ್ಮರಣೆ ಮತ್ತು ಕಿಸಾನ್ ಸನ್ಮಾನ್ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಬಿಜೆಪಿ ಕಚೇರಿಯಲ್ಲಿಯೂ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ 9 ಕೋಟಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ 16 ಸಾವಿರ ಕೋಟಿ ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ ರೈತರನ್ನುದ್ದೇಶಿಸಿ ಮಾತನಾಡುವರು.
ಅಟಲ್ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಮತ್ತು ನೀಲಾವರ ಗೋಶಾಲೆಯಲ್ಲಿ ಗೋಸೇವೆ, ಶಂಕರಪುರದ ಅನಾಥಾಶ್ರಮದಲ್ಲಿ ಹಣ್ಣುಹಂಪಲು ವಿತರಣೆ ಸೇರಿದಂತೆ ಬಿಜೆಪಿಯ ವಿವಿಧ ಮೋರ್ಚಾಗಳ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಕಾರ್ಕಳ, ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ ಇದ್ದರು