`ಅಧಿಕಾರ ದುರುಪಯೋಗಪಡಿಸಿ ಬಿಜೆಪಿ ಪಾಲಿಕೆ ಚುನಾವಣೆ ಗೆದ್ದಿದೆ’
(ಸುದ್ದಿಕಿರಣ ವರದಿ)
ಉಡುಪಿ: ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ಮಹಾನಗರಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ್ ಡಾ. ಜಿ. ಪರಮೇಶ್ವರ್ ಆರೋಪಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯ ನಡುವೆಯೂ ಬಿಜೆಪಿ ಗೆದ್ದಿದೆ. ಇದು ಅಧಿಕಾರದ ದುರುಪಯೋಗದ ಗೆಲುವು. ಈ ಫಲಿತಾಂಶದಿಂದ ಕಾಂಗ್ರೆಸ್ಸಿಗೆ ನಿರಾಸೆಯಾಗಿಲ್ಲ. ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ಚುನಾವಣೆಯ ಪ್ರಚಾರದಲ್ಲಿ ಹೆಚ್ಚು ಭಾಗವಹಿಸಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದು ಚರ್ಚಿಸಬೇಕಾದ ದೊಡ್ಡ ವಿಚಾರವಲ್ಲ. ಇಂಥ ಚುನಾವಣೆಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ನಡೆಯುತ್ತದೆ. ನನ್ನ ಆವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.
ಕಾಂಗ್ರೆಸ್ ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದ್ದು, ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್ ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾತಿಗಣತಿಗೆ ಸುಮಾರು 150 ಕೋಟಿ ರೂ. ಖರ್ಚಾಗಿದ್ದು, ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ಆ ವರದಿ ಬಿಡುಗಡೆ ಮಾಡಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ. ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ. ಆದರೆ, ಕಾಂತರಾಜ್ ಇದೀಗ ವರದಿ ನೀಡಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಿ, ವರದಿಯಲ್ಲಿ ನ್ಯೂನತೆ ಇದ್ದಲ್ಲಿ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ. ವರದಿ ಬಹಿರಂಗ ಮಾಡುವುದರಿಂದ ಸರ್ಕಾರಕ್ಕೆ ಮುಜುಗರ ಏನಿದೆ? ಯಾವುದೇ ಸಮುದಾಯ ಹೆಚ್ಚಿರುವುದು, ಕಡಿಮೆ ಇರುವುದು ಸ್ವಾಭಾವಿಕ. ರೀ ಸರ್ವೇ ಮಾಡೋಣ. ವರದಿ ಒಪ್ಪಿಕೊಳ್ಳುವ ಅಧಿಕಾರದ ಸರ್ಕಾರಕ್ಕಿದೆ ಎಂದರು.
ಕೋವಿಡ್ ಚಿಕಿತ್ಸೆ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ. ರಾಜ್ಯದಲ್ಲಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಇದ್ದರು.