ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 3, 2022
ಹಿಜಾಬ್ ಪ್ರಕರಣ: ಅನಗತ್ಯ ಗೊಂದಲ ಸೃಷ್ಟಿ
ಉಡುಪಿ: ಇಲ್ಲಿನ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಉದ್ದೇಶಪೂರ್ವಕವಾಗಿ ಗೊಂದಲವುಂಟುಮಾಡಲಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಯೂನಿಫಾರ್ಮ್ ಕಡ್ಡಾಯ ಇಲ್ಲ ಎಂಬ ಕಾನೂನಿದ್ದರೂ ಸರ್ಕಾರಿ ಪಿಯು ಕಾಲೇಜಿನಲ್ಲಿ 1985ರಿಂದಲೂ ಸಮವಸ್ತ್ರ ಕಡ್ಡಾಯ ಎಂಬ ನಿಯಮವಿದೆ.
ಹಿಜಾಬ್ ಬೇಕೆಂದು ಈಗ ಹೀಗೆ ಒತ್ತಾಯ ಮಾಡುವವರು ಕಳೆದ ಒಂದೂವರೆ ವರ್ಷದ ಹಿಂದೆ ಕಾಲೇಜು ಸಮವಸ್ತ್ರದಲ್ಲೇ ಕಾಲೇಜಿಗೆ ಬಂದಿದ್ದರು. ಯಾರದ್ದೋ ಕುಮ್ಮಕ್ಕಿನಿಂದ ಈ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ.
ಯೂನಿಫಾರ್ಮ್ ಬೇಕೇ ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನಿಸಲಿ.
ಯೂನಿಫಾರ್ಮ್ ಬೇಕು ಎಂದಾದರೆ ಎಲ್ಲರೂ ಸಮಾನ ಯೂನಿಫಾರ್ಮ್ ಧರಿಸಬೇಕು. ಯೂನಿಫಾರ್ಮ್ ಬೇಡ ಎಂದಾದರೆ ಯಾರು ಯಾವ ದಿರಿಸನ್ನು ಬೇಕಾದರೂ ಧರಿಸಬಹುದು. ಜೀನ್ಸ್ ಪ್ಯಾಂಟ್, ರುಮಾಲ್, ಸ್ಲೀವ್ ಲೆಸ್ ಹಾಕಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.
ಈ ವಿಷಯ ಕುರಿತು ಪದವಿ ಪೂರ್ವ ಶಿಕ್ಷಣ ಮಂಡಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕೆಲವರು ವಿವಾದ ಸೃಷ್ಟಿ ಮಾಡಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಸೌಹಾರ್ದಯುತ ವಾತಾವರಣ ಇದೆ. ಅದನ್ನು ಮುಂದುವರಿಯಲು ಬಿಡಿ ಎಂದು ಶಾಸಕ ಭಟ್ ಮನವಿ ಮಾಡಿದರು.