Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ 154 ಅನಾಥ ಶವಗಳಿಗೆ ಸದ್ಗತಿ ಸಂಸ್ಕಾರ

154 ಅನಾಥ ಶವಗಳಿಗೆ ಸದ್ಗತಿ ಸಂಸ್ಕಾರ

ಉಡುಪಿ, ಜು. 10, (ಸುದ್ದಿಕಿರಣ ವರದಿ): ಕೊರೊನಾದಿಂದ ಮೃತಪಟ್ಟಿರುವ, ಅಪಘಾತ ಸಹಿತ ಕಾಯಿಲೆಗಳಿಂದ ಮೃತಪಟ್ಟಿರುವ 154 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಜಿಲ್ಲಾ ನಾಗರಿಕ ಸಮಿತಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಗೌರವಯುತವಾಗಿ ನಡೆಸಿದ್ದು, ಶನಿವಾರ ಅಮಾವಾಸ್ಯೆ ದಿನ 154 ಅನಾಥ ಆತ್ಮಗಳಿಗೆ ಸದ್ಗತಿ ಪ್ರಾಪ್ತಿಗಾಗಿ ಪೆರಂಪಳ್ಳಿ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಯಾಗ ಸಭಾಂಗಣದಲ್ಲಿ ಕರಂಬಳ್ಳಿ ನಾಗರಾಜ್ ಐತಾಳ್ ನೇತೃತ್ವದ ಪುರೋಹಿತ ಬಳಗದಿಂದ ತಿಲಹೋಮ, ನಾರಾಯಣ ಬಲಿ ಮೊದಲಾದ ಧಾರ್ಮಿಕ ಪ್ರಕ್ರಿಯೆ ನಡೆದವು.

ಸಮಾಜಸೇವಕ ನಿತ್ಯಾನಂದ ಒಳಕಾಡು ಮುಂದಾಳತ್ವದಲ್ಲಿ ಎಲ್ಲಾ ಕಾರ್ಯಕ್ರಮ ನಡೆದವು. ಸುವರ್ಣ ನದಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಪಿಂಡ ವಿಸರ್ಜನೆ ಮಾಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಕಾರ್ಯಕ್ರಮಕ್ಕೆ ಭೇಟಿ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ ನೆಲೆಕಂಡಿರುವ ನಿರ್ಗತಿಕರು, ಅನಾಥರನ್ನು ಆಸ್ಪತ್ರೆಗೆ ದಾಖಲಿಸುವ ಸೇವಾಕಾರ್ಯದಲ್ಲಿ ಜಿಲ್ಲಾ ನಾಗರಿಕ ಸಮಿತಿ ನಿರತವಾಗಿದೆ. ವಾರಸುದಾರರು ಇಲ್ಲದಿರುವ ಅನಾಥ ಶವಗಳಿಗೆ ಅನಾಥಪ್ರಜ್ಞೆ ಕಾಡದಂತೆ, ಬಂಧುಗಳಂತೆ ಅಂತ್ಯಸಂಸ್ಕಾರ ನಡೆಸಿದ್ದಲ್ಲದೆ, ಸದ್ಗತಿಯ ಸತ್ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ ಶೆಟ್ಟಿ ಅಮಾಸೆಬೈಲು, ನಾಗರಿಕ ಸಮಿತಿ ಪದಾಧಿಕಾರಿಗಳಾದ ಮುರಳೀಧರ ಬಲ್ಲಾಳ್, ಸ್ವಾತಿ ಎಂ. ಬಲ್ಲಾಳ್, ಲಕ್ಷ್ಮೀ ಎಂ. ಬಲ್ಲಾಳ್, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಪಾಡಿಗಾರು ಮುರಳೀಧರ ರಾವ್, ಗಣೇಶ್ ರಾಜ್ ಸರಳಬೆಟ್ಟು, ರಾಮದಾಸ್ ಪಾಲನ್, ಸುಶೀಲಾ ರಾವ್ ಉಡುಪಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!