Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಅಸಮಾನತೆ ಸಮರ ನಿಗ್ರಹಕ್ಕೆ ಮಾನವೀಯತೆಯ ಅಸ್ತ್ರ ಪ್ರಯೋಗ

ಅಸಮಾನತೆ ಸಮರ ನಿಗ್ರಹಕ್ಕೆ ಮಾನವೀಯತೆಯ ಅಸ್ತ್ರ ಪ್ರಯೋಗ

ಉಡುಪಿ: ವಿಶೇಷ ಚೇತನರು ದೇವರ ಮಕ್ಕಳು, ಅವರ ಸಾಧನೆ ಎಲ್ಲರಿಗೂ ಮಾದರಿ. ಅವರನ್ನು ಸಮಾನವಾಗಿ ಕಾಣಬೇಕು. ಅಂಥವರ ಬಗೆಗೆ ಸಮಾಜದಲ್ಲಿರುವ ಅಸಮಾನತೆ ಎಂಬ ಸಮರದ ವಿರುದ್ಧ ಮಾನವೀಯತೆಯ ಅಸ್ತ್ರ ಪ್ರಯೋಗಿಸುವ ಮೂಲಕ ಜಯ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲತೆ ಎಂದರೆ ಅಂಗಾಂಗಗಳಲ್ಲಿನ ಕೊರತೆ ಎಂಬುದು ಸರಕಾರಿ ವ್ಯಾಖ್ಯಾನ. ಆದರೆ, ಅವರ ಸಾಧನೆ ನೋಡಿದರೆ ಇದು ಅವಕಾಶಗಳ ಕೊರತೆ ಎಂದು ವೇದ್ಯವಾಗುತ್ತದೆ. ದೇವರ ಮಕ್ಕಳಾದ ಅವರಲ್ಲಿ ಭಗವಂತ ಕೊರತೆ ಇಟ್ಟು, ಉತ್ತಮ ಸಾಧನೆ ಮಾಡುವ ಶಕ್ತಿ ತುಂಬಿ, ಜಗತ್ತಿಗೆ ಆತನ ಶಕ್ತಿಯ ಮಿತಿ ತೋರಿದ್ದಾನೆ. ಅವರ ಮೂಲಕ ಭಗವಂತನನ್ನು ಕಾಣಲು ಸಾಧ್ಯ. ವಿಶೇಷ ಚೇತನ ಮಕ್ಕಳನ್ನು ಸಾಕಿ ಸಲಹುವವರು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ನ್ಯಾಯ ಶೀಘ್ರವಾಗಿ ಮತ್ತು ಸುಲಭವಾಗಿ ಸಿಗಲಿ ಎನ್ನುವ ಕಾರಣಕ್ಕೆ ಕಾನೂನು ಅಳವಡಿಸಲಾಗಿದೆ. ನಾವು ಕರುಣೆಯನ್ನು ಸಮಾಜದ ಮೇಲೆ ಹೇಗೆ ತೋರಿಸುತ್ತೇವೆಯೋ ಅದರ ಆಧಾರದಲ್ಲಿ ಸದೃಢ ಸಮಾಜ ನಿಮರ್ಾಣ ಸಾಧ್ಯ. ಕಾನೂನಿಗೂ ಮೀರಿದ ಮಾನವೀಯತೆ ಮೆರೆಯಬೇಕು ಎಂದರು.
ವಿಶೇಷ ಚೇತನರ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸರಕಾರ ಇನ್ನೂ ಹೆಚ್ಚಿನ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡಲಿದೆ. ವಿಶೇಷ ಚೇತನರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಈಗಿರುವ ಸವಲತ್ತು ಅರ್ಹರಿಗೆ ತಲುಪಿಸುವಲ್ಲಿ ಶ್ರಮಿಸುವುದರೊಂದಿಗೆ ವಿವಿಧ ಇಲಾಖೆಗಳಲ್ಲಿ ವಿಶೇಷ ಚೇತನರಿಗಾಗಿ ಮೀಸಲಿಟ್ಟಿರುವ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡಲಾಗುವುದು ಎಂದರು,
ತನ್ನ ಮತಕ್ಷೇತ್ರದಲ್ಲಿ ತನ್ನದೇ ಆದ ಗಂಗಮ್ಮ ಸೋಮಪ್ಪ ಟ್ರಸ್ಟ್ ವತಿಯಿಂದ ವಿಶೇಷ ಚೇತನರಿಗೆ ವಿಶೇಷ ಸವಲತ್ತು ನೀಡಲಾಗುತ್ತದೆ. ತಾನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಯಲ್ಲಿಯೂ ತನ್ನ ಟ್ರಸ್ಟ್ ನ ಕಾರ್ಯಕ್ರಮ ವಿಸ್ತರಿಸುವುದಾಗಿ ಘೋಷಿಸಿದರು.
ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿ. ಪಂ. ಸಿಇಒ ಡಾ. ನವೀನ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಸಪ್ಪ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ವಿಶೇಷ ಚೇತನ ವಿದ್ಯಾರ್ಥಿನಿಯರಾದ ಸಿಂಧೂರಿ ಕಲ್ಯಾಣಪುರ ಮತ್ತು ಶ್ರದ್ಧಾ ಶೆಟ್ಟಿ ಕಾರ್ಕಳ ಅವರನ್ನು ಗೌರವಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!