ಹಿರಿಯರ ಆಚರಣೆಯಲ್ಲಿ ದೂರದೃಷ್ಟಿತ್ವದೊಂದಿಗೆ ವಿಜ್ಞಾನ ಸಮ್ಮಿಳಿತ
(ಸುದ್ದಿಕಿರಣ ವರದಿ)
ಶಿರ್ವ: ನಮ್ಮ ಹಿರಿಯರ ಆಚರಣೆಗಳಲ್ಲಿ ದೂರದೃಷ್ಟಿತ್ವದೊಂದಿಗೆ ವಿಜ್ಞಾನವೂ ಸೇರಿಕೊಂಡಿದೆ ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ, ಪ್ರಗತಿಪರ ಸಾವಯವ ಕೃಷಿ ರೈತ ಮಹಿಳೆ ಮಧುರಾ ನಾಯಕ್ ಹೇಳಿದರು.
ಬಂಟಕಲ್ಲು ಶ್ರೀದೇವಳದ ಸಭಾಂಗಣದಲ್ಲಿ ನಡೆದ ಶ್ರೀ ದುರ್ಗಾ ಮಹಿಳಾ ಚಂಡೆ ಬಳಗದ ದಶಮಾನೋತ್ಸವ ಪ್ರಯುಕ್ತ ಏರ್ಪಡಿಸಿದ ಶ್ರಾವಣ ಸಂಭ್ರಮ, ಸಾಧಕರಿಗೆ ಸನ್ಮಾನ ಮತ್ತು ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನವಿದೆ. ನಾಗರಪಂಚಮಿ ಪ್ರಕೃತಿ ಆರಾಧನೆಯ ಮೊದಲ ಹಬ್ಬವಾಗಿದ್ದು, ನಂತರ ಬರುವ ಚೂಡಿಪೂಜೆ, ಹೊಸ್ತಿಲಪೂಜೆ, ವರಮಹಾಲಕ್ಷ್ಮೀ ಪೂಜೆ, ಉಡಿ ತುಂಬಿಸುವುದು ಎಲ್ಲವೂ ಗೃಹಿಣಿಯರಿಗೆ ಪಾವಿತ್ರ್ಯತೆ ತುಂಬುವ ಹಬ್ಬಗಳು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಗಿರಿಜಾ, ಶ್ರಾವಣ ಮಾಸ ಪ್ರಕೃತಿಯ ಆರಾಧನೆಯೊಂದಿಗೆ ಹಬ್ಬಗಳ ಸರಣಿಗೆ ಚಾಲನೆ ನೀಡುವ ಮಾಸ ಎಂದರು.
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಕಲಾಸಾಧಕ, ಚಂಡೆವಾದನ ಗುರು ಪ್ರವೀಣ್ ನಾಯಕ್, ಉನ್ನತ ಶಿಕ್ಷಣದಲ್ಲಿ ಎರಡು ಚಿನ್ನದ ಪದಕ ಗಳಿಸಿದ ಜ್ಯೋತಿ ಬೋರ್ಕಾರ್, ಪ್ರಾಚ್ಯ ಶಿಲಾಶಾಸನ ಅಧ್ಯಯನ ತಜ್ಞ ಸುಭಾಸ್ ನಾಯಕ್, ಶಿರ್ವ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಕೆ. ರಾಮರಾಯ ಪಾಟ್ಕರ್ ಅವರನ್ನು ಬಳಗದ ವತಿಯಿಂದ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಸಹಿತ ವೇದಿಕೆಯಲ್ಲಿರುವ ಗಣ್ಯರು ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾ ಮಹಿಳಾ ಚಂಡೆ ಬಳಗ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿದರು.
ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು, ಲೋಕೋಪಯೋಗಿ ಇಲಾಖೆ ನಿವೃತ್ತ ಅಭಿಯಂತರ ವಿಜಯಾನಂದ ನಾಯಕ್, ಶಶಿಕಲಾ ಪ್ರಭಾಕರ ನಾಯಕ್, ಸುಮಿತ್ರಾ ನಾಯಕ್ ಮಣಿಪಾಲ ಮೊದಲಾದವರಿದ್ದರು.
ಆಶಾ ನಾಯಕ್, ಶೈಲಜಾ ಪಾಟ್ಕರ್, ಅಕ್ಷತಾ ನಾಯಕ್, ಸಂಜನಾ ನಾಯಕ್ ಸನ್ಮಾನಪತ್ರ ವಾಚಿಸಿದರು. ನಾಗವೇಣಿ ಪ್ರಭು ವರದಿ ಓದಿದರು. ಭವಾನಿ ನಾಯಕ್ ನಿರೂಪಿಸಿದರು. ಜ್ಯೋತಿ ನಾಯಕ್ ವಂದಿಸಿದರು