Wednesday, July 6, 2022
Home ಸಮಾಚಾರ ನಳಿನ್ ಆಡಿಯೊ ಕುರಿತ ಚರ್ಚೆ ಅಪ್ರಸ್ತುತ

ನಳಿನ್ ಆಡಿಯೊ ಕುರಿತ ಚರ್ಚೆ ಅಪ್ರಸ್ತುತ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿವಾದಾಸ್ಪದ ಆಡಿಯೊದಲ್ಲಿರುವ ಧ್ವನಿ ತನ್ನದಲ್ಲ ಎಂದು ಸ್ಪಷ್ಟಪಡಿಸಿದ ಮೇಲೆ ಆ ಕುರಿತ ಚರ್ಚೆಯೇ ಅಪ್ರಸ್ತುತ. ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಡಿಯೊ ನನ್ನದಲ್ಲ ಎಂದು ನಳಿನ್ ಸ್ಪಷ್ಟವಾಗಿ ಹೇಳಿದ್ದು, ಆ ಬಗ್ಗೆ ತನಿಖೆ ನಡೆಸಲು ಸಿಎಂ ಮನವಿ ಮಾಡಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ.

ನಳಿನ್ ಅವರೇ ನಾನಲ್ಲ ಎಂದ ಮೇಲೆ, ಅದರಲ್ಲಿರುವುದು ನಳಿನ್ ಧ್ವನಿಯೇ ಅಲ್ಲ ಎಂದು ನಾವು ಭಾವಿಸಿದ್ದೇವೆ ಎಂದರು.

ಒಂದು ವೇಳೆ ನಳಿನ್ ಅದು ತಮ್ಮದೇ ಧ್ವನಿ ಎಂದಿದ್ದರೆ ಸಂಚಲನವಾಗುತ್ತಿತ್ತು. ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ವತಃ ನಳಿನ್ ಹೇಳಿದ್ದಾರೆ. ಹಾಗಾಗಿ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ.

ಜಗದೀಶ ಶೆಟ್ಟರ್ ಮತ್ತು ಈಶ್ವರಪ್ಪ ಇಬ್ಬರೂ ನಮ್ಮ ಪಕ್ಷದ ಪ್ರಮುಖ ನಾಯಕರಾಗಿದ್ದು, ಇಬ್ಬರೂ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಆಡಿಯೊ ಸುಳ್ಳು ಎನ್ನುವುದು ಸಾಬೀತಾಗುತ್ತದೆ ಎಂದು ಭಟ್ ಹೇಳಿದರು.

ಮುಖ್ಯಮಂತ್ರಿ ಕರೆದಿರುವ ಶಾಸಕಾಂಗ ಸಭೆ ಕುರಿತು ಪ್ರತಿಕ್ರಿಯಿಸಿದ ಭಟ್, ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ಶಾಸಕನಾಗಿ ನಾನು ಒತ್ತಾಯಿಸುತ್ತೇನೆ. ನಾಯಕತ್ವ ಬದಲಾವಣೆ ಸಲುವಾಗಿ ನನ್ನ ಬೇಡಿಕೆ ಅಲ್ಲ. ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ ಸಭೆ ಮಾಡಬೇಕು.

ಅಧಿವೇಶನಕ್ಕೂ ಮುನ್ನ ಎಲ್ಲ ಶಾಸಕರ ಸಭೆ ಕರೆಯುವುದು ಸಂಪ್ರದಾಯ. ಶಾಸಕರ ಅಭಿಪ್ರಾಯ ತೆಗೆದುಕೊಂಡು ಅಧಿವೇಶನ ಆರಂಭಿಸುವುದು ಉತ್ತಮ ಎಂದರು.

ಇದೇ ಅಭಿಪ್ರಾಯವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮೊದಲಾದವರು ವ್ಯಕ್ತಪಡಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!