ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ
(ಸುದ್ದಿಕಿರಣ ವರದಿ)
ಉಡುಪಿ: ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಶಾಂತಚಿತ್ತವಾಗಿ ಕುಳಿತು ಯೋಚಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಆರ್. ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಮತ್ತು ರೋಟರಿ ಕ್ಲಬ್ ಮಣಿಪಾಲ ಸಂಯುಕ್ತಾಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಲಾದ ಆತ್ಮಹತ್ಯೆ ತಡೆ ದಿನ ಉದ್ಘಾಟಿಸಿ ಮಾತನಾಡಿದರು.
ಆತ್ಮಹತ್ಯೆ ಮಾಡಿಕೊಳ್ಳುವವರು ಮೊದಲು ತಮ್ಮ ಹತ್ತಿರದವರ ಬಳಿ ಆತ್ಮಹತ್ಯೆ ಆಲೋಚನೆ ಬಗ್ಗೆ ಕೆಲವೊಂದು ಸುಳಿವು ನೀಡಿರುತ್ತಾರೆ. ಅಂಥ ಸಂದರ್ಭದಲ್ಲಿ ಮನೆಯವರು ತಕ್ಷಣ ತಜ್ಞರ ನೆರವು ಪಡೆಯುವ ಮೂಲಕ ಅಥವಾ ವ್ಯಕ್ತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವ ಮೂಲಕ ಅವರು ಆತ್ಮಹತ್ಯೆ ಯೋಚನೆಯಿಂದ ದೂರವಾಗುವಂತೆ ಮಾಡಬೇಕು ಎಂದರು.
ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ, ಖ್ಯಾತ ಮನೋಚಿಕಿತ್ಸಕ ಡಾ. ಪಿ. ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮನೋವೈದ್ಯಕೀಯ ಶುಶ್ರೂಷಕ ಬೆಂಜಮಿನ್ ಐರ್ಲೆಂಡ್ ಅಭ್ಯಾಗತರಾಗಿದ್ದರು.
ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯ ಕೆ. ಶೆಟ್ಟಿ ಸ್ವಾಗತಿಸಿ, ಆಪ್ತ ಸಮಾಲೋಚಕ ಲೋಹಿತ್ ಕೆ. ವಂದಿಸಿದರು. ಸುಚಿತ್ರ ನಿರೂಪಿಸಿದರು.