Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಆನ್ ಲೈನ್ ತರಗತಿಗೆ ವಿರೋಧ

ಆನ್ ಲೈನ್ ತರಗತಿಗೆ ವಿರೋಧ

ಸುದ್ದಿಕಿರಣ ವರದಿ
ಗುರುವಾರ, ಜನವರಿ 27

ಆನ್ ಲೈನ್ ತರಗತಿಗೆ ವಿರೋಧ
ಉಡುಪಿ: ಕಾಲೇಜಿನಲ್ಲಿ ಹಿಜಾಬ್ ಧರಿಸಲು ಸಮ್ಮತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರು ಆನ್ ಲೈನ್ ತರಗತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಸಂವಿಧಾನಾತ್ಮಕವಾಗಿ ತಮ್ಮ ಹಕ್ಕಾಗಿರುವ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತೇವೆ. ನಮಗೆ ಯಾವುದೇ ಆನ್ ಲೈನ್ ಕ್ಲಾಸ್ ಬೇಡ. ಇತರ ವಿದ್ಯಾರ್ಥಿನಿಯರೊಂದಿಗೆ ತಾರತಮ್ಯ ಮಾಡಬೇಡಿ ಎಂದು ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ ನಾವು ಬೇರೆಡೆ ಅದನ್ನು ನಿರೀಕ್ಷಿಸುವುದು ಅಸಾಧ್ಯ. ನಾವು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಆಗಿರುವುದರಿಂದ ನಮಗೆ ಆನ್ ಲೈನ್ ಕ್ಲಾಸ್ ನಲ್ಲಿ ಲ್ಯಾಬ್ ಗೆ ಹೋಗಲು ಆಗುವುದಿಲ್ಲ. ಈಗಾಗಲೇ ನಮಗೆ ಒಂದು ತಿಂಗಳ ತರಗತಿ ನಷ್ಟವಾಗಿದೆ. ಕಾಲೇಜಿನ ಉಳಿದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಸಿದ್ಧರಿದ್ದಾರೆ. ಆದರೆ, ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯಗೊಂಡಿದ್ದಾರೆ.

ನಮ್ಮ ಪ್ರತಿಭಟನೆ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದರಿಂದ ಅವರು ಭಯಗೊಂಡಿದ್ದಾರೆ. ಆದರೆ, ನೈತಿಕವಾಗಿ ನಮಗೆ ಬೆಂಬಲ ಸೂಚಿಸಿದ್ದಾರೆ.

ಹಿಜಾಬ್ ಧರಿಸುವುದು ನಮ್ಮ ಹಕ್ಕು. ಹಿಜಾಬ್ ಇಲ್ಲದೆ ತರಗತಿಯಲ್ಲಿ ಕುಳಿತುಕೊಳ್ಳಲು ನಮಗೆ ಸುಖ (ಕಂಫರ್ಟ್) ಎಂದೆನಿಸುವುದಿಲ್ಲ ಎಂದು ಹೇಳಿದರು.

ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಮುಸ್ಲಿಂ ಮುಖಂಡರ ಸಭೆ ನಡೆಸಿ, ಹಿಜಾಬ್ ಧರಿಸದೆ ಬರಲು ವಿದ್ಯಾರ್ಥಿನಿಯರು ಮತ್ತು ಅವರ ಪಾಲಕರ ಮನವೊಲಿಸಲಾಗುವುದು.

ಅಷ್ಟಕ್ಕೂ ಅವರು ಹಿಜಾಬ್ ಧರಿಸದೆ ಬರಲು ಸಮ್ಮತಿಸದಿದ್ದಲ್ಲಿ ಆನ್ ಲೈನ್ ತರಗತಿ ನಡೆಸಲಾಗುವುದು. ನಮಗೆ ಆ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗಕೂಡದು.

ಯಾರದೋ ಕುಮ್ಮಕ್ಕಿನಿಂದ ಇದುವರೆಗೆ ಇಲ್ಲದ ಸಮಸ್ಯೆಯನ್ನು ಇದೀಗ ಹುಟ್ಟುಹಾಕಿ ಉಡುಪಿಯ ಸಾಮರಸ್ಯ ಕದಡಲು ಯತ್ನಿಸಲಾಗುತ್ತಿದೆ ಎಂದಿದ್ದರು.

ಸರಕಾರವೂ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತ್ತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!