ಉಡುಪಿ: ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ದ್ರವರೂಪದ ಆಮ್ಲಜನಕ ಸ್ಥಾವರ (ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್)ವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು.
ಆರೋಗ್ಯ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ದ್ರವ ರೂಪದ ಆಮ್ಲಜನಕ ಸ್ಥಾವರ, 660 ಜಂಬೋ ಸಿಲಿಂಡರ್ ಗಳಷ್ಟು ಅಂದರೆ 6 ಸಾವಿರ ಲೀ. ಸಾಮರ್ಥ್ಯ ಹೊಂದಿದೆ. ಈಗಾಗಲೇ ಕಾರ್ಯಾಚರಿಸುತ್ತಿರುವ ಈ ಘಟಕಕ್ಕೆ ಬಳ್ಳಾರಿಯ ಖಾಸಗಿ ಸಂಸ್ಥೆಯಿಂದ ದ್ರವ ರೂಪದ ಆಮ್ಲಜನಕ ತಂದು ತುಂಬಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಆವಶ್ಯಕತೆ ಇದ್ದಾಗ ಈ ಘಟಕದಿಂದಲೇ ಪೂರೈಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ತಗ್ಗಿಸುವಲ್ಲಿಯೂ ಈ ಘಟಕ ಪ್ರಮುಖ ಪಾತ್ರ ವಹಿಸಿದೆ ಎಂದರು.
ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಳೀಯ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಮತ್ತು ಜಿಲ್ಲಾಧಿಕಾರಿ ಜಿ. ಜಗದೀಶ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ ಭಟ್ ವೈ., ಡಿ.ಎಚ್.ಒ. ಡಾ. ಸುಧೀರಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂದನ ನಾಯಕ್ ಮೊದಲಾದವರಿದ್ದರು
ಜಿಲ್ಲಾಸ್ಪತ್ರೆಯಲ್ಲಿ ದ್ರವರೂಪದ ಆಮ್ಲಜನಕ ಸ್ಥಾವರ ಉದ್ಘಾಟನೆ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...